ಮೈಸೂರು ರಾಜ್ಯ 1864 - 1901
ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್ ಹಂಟರ್ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್ ಸಾಮರ್ಸನ್, ಲೆ. ಇ.ಡಬ್ಲ್ಯೂ.ಸಿ.ಎಚ್. ಮಿಲ್ಲರ್, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್ ಹಂಟರ್ ನಂತರ ಲೆ. ವ್ಯಾನ್ ಸಾಮರ್ಸನ್ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್ಪೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್ಗಳು, ಫಾರೆಸ್ಟರ್ಗಳು ಮತ್ತು ವಾಚರ್ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್ಬೆಲ್-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.