ಕರ್ನಾಟಕದಲ್ಲಿ ಮುಖ್ಯವಾಗಿ ಎಲೆ ಉದುರುವ ಹಾಗೂ ನಿತ್ಯ ಹರಿದ್ವರ್ಣ ಕಾಡುಗಳಿವೆ. ಎಲೆ ಉದರುವ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಎಲೆ ಉದುರುವ ಲಕ್ಷಣಗಳನ್ನು ಹೊಂದಿದ ಮರಗಳು ಹಾಗೂ ನಿತ್ಯ ಹರಿದ್ವರ್ಣ ಅರಣ್ಯಗಳಲ್ಲಿ ಯಾವಾಗಲೂ ಹಸಿರಾಗಿರುವಂತಹ ಮರಗಳನ್ನು
ಹೊಂದಿರುತ್ತವೆ. ಎಲೆ ಉದುರುವ ಮರಗಳು ಪ್ರತೀ ವರ್ಷ ಒಂದು ನಿರ್ಧಿಷ್ಟ ಕಾಲದಲ್ಲಿ ಎಲ್ಲಾ ಎಲ್ಲೆಗಳನ್ನು ಕೆಲವು ದಿನಗಳಿಂದ ಹಿಡಿದು
ತಿಂಗಳವರೆಗೆ ಉದುರಿಸುತ್ತವೆ. ಉಷ್ಣವಲಯದ ಎಲೆ ಉದುರುವ ಕಾಡುಗಳಲ್ಲಿ ಮಣ್ಣಿನಲ್ಲಿ ನೀರಿನ ಲಭ್ಯತೆಯ ಮೇಲೆ ಎಲೆ ಉದುರುವಿಕೆ
ಲಕ್ಷಣೆಗಳು ಅವಲಂಬಿಸಿರುತ್ತದೆ. ನಿತ್ಯ ಹರಿದ್ವರ್ಣ ಮರಗಳು ಸಹಿತ ಎಲೆ ಉದುರುವಿಕೆ ಹೊಂದಿರುತ್ತವೆ ಆದರೆ ಎಲ್ಲಾ ಎಲೆಗಳನ್ನು ಒಂದೇ
ಕಾಲದಲ್ಲಿ ಉದುರಿಸುವುದಿಲ್ಲ. ಆದ್ದರಿಂದ ವರ್ಷದಲ್ಲಿ ಯಾವಗಲೂ ಎಲೆಗಳನ್ನು ಹೊಂದಿರುವಂತೆ ಕಾಣುತ್ತವೆ. ರಾಜ್ಯದ ಒಣಪ್ರದೇಶಗಳಲ್ಲಿ
ಮತ್ತು ಅವನತಿ ಹೊಂದಿದ ಅರಣ್ಯ ಪ್ರದೇಶಗಳಲ್ಲಿ ಮುಳ್ಳಿನ ಜಾತಿಯ ಗಿಡಗಂಟುಗಳು ಹೆಚ್ಚಿರುತ್ತವೆ. ಆ ಪ್ರದೇಶದ ಕಠಿಣ ಪ್ರರಿಸ್ಥಿತಿಗಳಿಗೆ
ಹೊಂದಿಕೊಳ್ಳಲು, ನೀರು ಮತ್ತು ಶಕ್ತಿಯನ್ನು ಸಂರಕ್ಷಿಸಿಕೊಳ್ಳಲು ಹಾಗೂ ಸಸ್ಯಹಾರಿ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮರಗಳು ಈ ರೀತಿಯಾಗಿ
ರೂಪಾಂತರಗೊಳ್ಳುತ್ತವೆ.
ಕರ್ನಾಟಕ ರಾಜ್ಯದಲ್ಲಿ ನಿತ್ಯ ಹರಿದ್ವರ್ಣ, ಅರೆ ನಿತ್ಯ ಹರಿದ್ವರ್ಣ, ತೇವಭರಿತ ಎಲೆ ಉದುರುವ, ಒಣ ಎಲೆ ಉದುರುವ ಹಾಗೂ ಮುಳ್ಳಿನ
ಕಾಡುಗಳಂತಹ ಉಷ್ಣವಲಯದ ಪ್ರಮುಖ ಕಾಡುಗಳ ಜೊತೆಗೆ ಕೆಲವು ವಿಶೇಷವಾದ ಅರಣ್ಯಗಳನ್ನು ನೋಡಬಹುದು. ಇವುಗಳಲ್ಲದೇ
ಹುಲ್ಲುಗಾವಲಿನಿಂದ ಆವೃತ್ತವಾದ ಶೋಲಾ ಅರಣ್ಯ, ಕಾಂಡ್ಲವನ, ಮಿರಿಸ್ಟಿಕಾ ಜೌಗು ಅರಣ್ಯ, ಕಮರಾ ಅರಣ್ಯ (ಹಾರ್ಡ್ವಿಕಿಯಾ ಬಿನಾಟಾ),
ಧೂಪ (ಬೋಸ್ವಿಲಿಯಾ ಸೆರಾಟಾ) ಮತ್ತು ಜಾಲಾರಿ (ಶೊರಿಯಾ ತಲುರಾ), ಕೊಡಗು ಜಿಲ್ಲೆಯ ದೇವರಕಾಡುಗಳು, ಮೈಸೂರು ಮತ್ತು ಕೊಡಗು
ಜಿಲ್ಲೆಯ ಹಡ್ಲು, ಸೊರಬ, ಸಾಗರ ಮತ್ತು ಬನವಾಸಿ ತಾಲೂಕುಗಳ ಕಾನ್ಸ್ ಮುಂತಾದವುಗಳನ್ನು ಸಹ ಕಾಣಬಹುದು.