ಯೋಜನಾ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಯೋಜಿತ ಉದ್ದೇಶಗಳಿಗೆ ಅನುಗುಣವಾಗಿ ನಿರ್ವಹಿಸಲಾಗಿದೆ ಎನ್ನುವುದನ್ನು ತಿಳಿಯಲು ನಿಯತಕಾಲಿಕವಾಗಿ ಅವುಗಳ ಅನುಷ್ಠಾನ ದ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ಸಂಗ್ರಹಿಸಿದ ಮಾಹಿತಿ ವಿಶ್ಲೇಷಣದಿಂದ ಯೋಜನೆಗಳ ಅನುಷ್ಠಾನ ಗುಣಮಟ್ಟವನ್ನು ಸುಧಾರಿಸುವುದನ್ನು ಮೌಲ್ಯಮಾಪನ ಎನ್ನಬಹುದು. ಮೌಲ್ಯಮಾಪನದಿಂದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಲೋಪದೋಷಗಳಿದ್ದಲ್ಲಿ ಅವನ್ನು ಸರಿಪಡಿಸಿಕೊಂಡು ಪರಿಣಾಮಕಾರಿಯಾಗಿ ಯೋಜನಾ ಉದ್ದೇಶಗಳಿಗೆ ಅನುಗುಣವಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ. ನಿಷ್ಪಕ್ಷವಾದ ಮೌಲ್ಯಮಾಪನದಿಂದ ಒಂದು ಸಂಸ್ಥೆ ಅನುಷ್ಠಾನಗೊಳಿಸುತ್ತಿರುವ ಚಟುವಟಿಕೆಗಳ ನೈಜತೆಯನ್ನು ತಿಳಿಯಬಹುದು. 1980ರಿಂದಲೂ ಕರ್ನಾಟಕ ಅರಣ್ಯ ಇಲಾಖೆ ವಿವಿಧ ಅರಣ್ಯೀಕರಣ ಚಟುವಟಿಕೆಗಳ ಮೌಲ್ಯಮಾಪನ ನಡೆಸುತ್ತಿದೆ. ಪ್ರಾರಂಭದಲ್ಲಿ ಮೌಲ್ಯಮಾಪನಗಳನ್ನು ಅಂತರಿಕವಾಗಿ ನಿರ್ವಹಿಸಲಾಗಿದ್ದರೂ, ಕೆಲವೊಂದು ವಿಶೇಷ ಕಾರ್ಯಕ್ರಮಗಳು/ಯೋಜನೆಗಳ ಬಗ್ಗೆ ಬಾಹ್ಯ ಸಂಸ್ಥೆಗಳಿಂದ ಮೌಲ್ಯಮಾಪನಗಳನ್ನು ಸಹ ಮಾಡಲಾಗಿರುತ್ತದೆ. ಕರ್ನಾಟಕ ಮೌಲ್ಯಮಾಪನ ನೀತಿ 2011ರ ಪ್ರಕಾರ ಎಲ್ಲಾ ಯೋಜನಾ/ಯೋಜನೇತರ ಕಾರ್ಯಕ್ರಮಗಳು/ಯೋಜನೆಗಳನ್ನು ಪ್ರತಿ ಐದು ವರ್ಷಕ್ಕೊಮ್ಮೆ ಆಂತರೀಕವಾಗಿ ಹಾಗೂ ಬಾಹ್ಯ ಸಂಸ್ಥೆಗಳ ಮೂಲಕ ಮೌಲ್ಯಮಾಪನವನ್ನು ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕಾಗುತ್ತದೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ನೀತಿ ಹಾಗೂ ಮಾರ್ಗಸೂಚಿಗಳನುಸಾರ ಕರ್ನಾಟಕ ಅರಣ್ಯ ಇಲಾಖೆ ಕೈಗೊಂಡಿದ ಎಲ್ಲಾ ಅರಣ್ಯ ಕೆಲಸಗಳ ಮೌಲ್ಯಮಾಪನವನ್ನು ಅಂತರಿಕ ಹಾಗು ಬಾಹ್ಯ ಸಂಸ್ಥೆಗಳ ಮೂಲಕ ನಿರ್ವಹಿಸುತ್ತಿದೆ.