ಕರ್ನಾಟಕ ಅರಣ್ಯ ಇಲಾಖೆಯ ಕಾರ್ಯ ಯೋಜನಾ ಘಟಕ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಕಾರ್ಯ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ, ಅರಣ್ಯ ಪ್ರದೇಶಗಳ ಮೋಜಣೆ ಮತ್ತು ಗಡಿ ಗುರುತಿಸುವಿಕೆ, ಮೀಸಲು ಅರಣ್ಯಗಳ ರಚನೆ ಮತ್ತು ಘೋಷಣೆ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ. ಈ ಕೆಲಸಗಳನ್ನು ಇಲಾಖೆಯ ಹಲವು ಯೋಜನೆ ಮತ್ತು ಯೋಜನೇತರಗಳಡಿ ಮುಖ್ಯವಾಗಿ ರಾಜ್ಯ ವಲಯದ ಯೋಜನೆಯಾದ “ಕಾರ್ಯ ಯೋಜನಾ ಸಂಸ್ಥೆ” ಮೂಲಕ ಅನುಷ್ಠಾನಗೊಳಿಸುತ್ತದೆ. ಕಾರ್ಯ ಯೋಜನೆ ಎಂದರೆ ಅರಣ್ಯದ ನಿರ್ವಹಣೆಗೆ ತಯಾರಿಸಿದ ವೈಜ್ಞಾನಿಕ ವರದಿ. ಕಾರ್ಯ ಯೋಜನೆಯ ರಚನೆ ವೈಜ್ಞಾನಿಕ ಕಾರ್ಯವಾಗಿದೆ ಮತ್ತು ಒಂದು ನಿರ್ದಿಷ್ಟ ಅವಧಿಗೆ, ಅಂದರೆ ಸಾಮಾನ್ಯವಾಗಿ ಹತ್ತು ವರ್ಷಗಳ ಅವಧಿಗೆ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ. ಗಣನೀಯ ಸಮೀಕ್ಷೆ ಹಾಗು ವಿವರಗಳ ಶೇಖರಣೆ ಮತ್ತು ಸಮಾಲೋಚನೆಗಳ ನಂತರ ಕಾರ್ಯ ಯೋಜನಾ ಅಧಿಕಾರಿ ವರದಿಯನ್ನು ಸಿದ್ಧಪಡಿಸುತ್ತಾರೆ. ಕಾರ್ಯ ಯೋಜನೆ ಪ್ರತಿ ಅರಣ್ಯ ವಿಭಾಗದ ಅರಣ್ಯಗಳ ಸೂಕ್ತ ನಿರ್ವಹಣೆಗಾಗಿ ಅರಣ್ಯ ಪ್ರದೇಶದ ಆಧರಿತ ವೈಜ್ಞಾನಿಕ ಸೂಚನೆಗಳನ್ನು ನೀಡುತ್ತದೆ. ಕಾರ್ಯ ಯೋಜನೆ, ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇವರಿಂದ ಅನುಮೋದನೆಗೊಂಡಿರುತ್ತದೆ. ಅರಣ್ಯಗಳ ಗಡಿಗಳನ್ನು ಮೋಜಣೆ ಮತ್ತು ಗಡಿ ಗುರುತಿಸುವಿಕೆ ಮೂಲಕ ಕ್ಷೇತ್ರ ಮಟ್ಟದಲ್ಲಿ ನಿರ್ಧರಿಸಿ, ಈ ಜಾಗಗಳಲ್ಲಿ ಕಲ್ಲುಗಳು, ಸಿಮೆಂಟ್ ಕಾಂಕ್ರೀಟ್ ಕಂಬಗಳ ಮೂಲಕ ನೇಲದಲ್ಲಿ ಅವುಗಳನ್ನು ಗುರುತಿಸಲಾಗುತ್ತದೆ. ಮೀಸಲು ಅರಣ್ಯದ ಕಂಪಾರ್ಟ್‌ಮೆಂಟ್ ಹಾಗೂ ಬ್ಲಾಕ್ ಗಳನ್ನು ಮೋಜಣೆ ಮತ್ತು ಗಡಿಗಳ ಸಮೀಕ್ಷೆ ನಂತರ ಗ್ಯಾಲ್ವನೈಜ್ಡ್‌ ಕಬ್ಬಿಣದ ಫಲಕಗಳ ಮೂಲಕ ಗುರುತಿಸಲಾಗುತ್ತದೆ. ಕರ್ನಾಟಕ ಅರಣ್ಯ ಕಾಯ್ದೆ ಕಲಂ-4ರ ಪ್ರಕಾರ ರಾಜ್ಯ ಸರ್ಕಾರವು ಸರ್ಕಾರದ ಯಾವುದೇ ಜಾಗವನ್ನು ಮೀಸಲು ಅರಣ್ಯವಾಗಿ ಅಧಿಸೂಚಿಸಬಹುದು. ಕಾಲಂ-4ರಡಿಯಲ್ಲಿ ಘೋಷಿಸಿದ ಪ್ರದೇಶಗಳನ್ನು ಕಲಂ-5 ರಿಂದ 18 ರವರೆಗೆ ನಮೂದಿಸಿದ ಪ್ರಕಾರ ಮೀಸಲು ಅರಣ್ಯವಾಗಿ ಘೋಷಿಸಲು ಮೋಜಣೆ ಹಾಗೂ ನಕ್ಷೆಯನ್ನು ಸಹ ತಯಾರಿಸುತ್ತವೆ. ಕಾರ್ಯಯೋಜನೆ ಘಟಕವು ಏಳು ವಿಧಗಳ 28 ನಮೂನೆಗಳಲ್ಲಿ ಅರಣ್ಯ ದಾಖಲೆಗಳ ಹಾಗೂ ಅರಣ್ಯ ನಕ್ಷೆಗಳ, ಡೀಮ್ಡ್ ಅರಣ್ಯ ಪ್ರದೇಶಗಳ ದಾಖಲೆಗಳ ನಿರ್ವಹಣೆ ಹಾಗೂ ಅರಣ್ಯ ವ್ಯವಸ್ಥಾಪನೆ ಜವಾಬ್ದಾರಿಯನ್ನು ಸಹ ಹೊಂದಿರುತ್ತದೆ. ಕಾರ್ಯ ಯೋಜನಾ ಘಟಕದ ಯೋಜನೆಗಳು: ಕರ್ನಾಟಕ ಅರಣ್ಯ ಇಲಾಖೆಯ ಕಾರ್ಯ ಯೋಜನಾ ಘಟಕ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಕಾರ್ಯ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ, ಅರಣ್ಯ ಪ್ರದೇಶಗಳ ಮೋಜಣೆ ಮತ್ತು ಗಡಿ ಗುರುತಿಸುವಿಕೆ, ಮೀಸಲು ಅರಣ್ಯಗಳ ರಚನೆ ಮತ್ತು ಘೋಷಣೆ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ. ಈ ಕೆಲಸಗಳನ್ನು ಇಲಾಖೆಯ ಯೋಜನೆ ಮತ್ತು ಯೋಜನೇತರಗಳಡಿಯಲ್ಲಿ ತೆಗೆದುಕೊಳ್ಳಲಾಗುತ್ತದೆ.