ಕರ್ನಾಟಕ ಅರಣ್ಯ ಇಲಾಖೆಯು ಕಾಂಪಾ ಯೋಜನೆಯಡಿ ಕೈಗೊಳ್ಳುವ ಚಟುವಟಿಕೆಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ವರ್ಗೀಕರಿಸಬಹುದು, ಅವುಗಳೆಂದರೆ 1. ಪರಿಹಾರಾತ್ಮಕ ನೆಡುತೋಪು ಬೆಳೆಸುವುದು: ಅರಣ್ಯೇತರ ಉದ್ದೇಶಗಳಿಗೆ ಅರಣ್ಯ ಪ್ರದೇಶವನ್ನು ಬಿಡುಗಡೆ ಮಾಡಲು ಅನುಮೋದನೆ ನೀಡುವಾಗ ಒದಗಿಸಿದ ಅರಣ್ಯೇತರ ಭೂಮಿಯಲ್ಲಿ ಪರಿಹಾರಾತ್ಮಕ ನೆಡುತೋಪುಗಳನ್ನು ಬೆಳೆಸುವುದು ಮುಖ್ಯ ಕಾರ್ಯಕ್ರಮವಾಗಿದೆ. ಪರಿಹಾರಾತ್ಮಕ ನೆಡುತೋಪು ಬೆಳೆಸಲು ಒದಗಿಸಿದ ಅರಣ್ಯೇತರ ಭೂಮಿ ಸಾಮಾನ್ಯವಾಗಿ ಬಿಡುಗಡೆ ಮಾಡಿದ ಅರಣ್ಯ ಭೂಮಿಗೆ ವಿಸ್ತೀರ್ಣದಲ್ಲಿ ಸಮನಾಗಿ ಇರುತ್ತದೆ. ವಿಶೇಷ ಪ್ರಕರಣಗಳಲ್ಲಿ ಪರಿಹಾರಾತ್ಮಕ ನೆಡುತೋಪನ್ನು ಬಿಡುಗಡೆ ಮಾಡಿದ ಅರಣ್ಯ ಪ್ರದೇಶದ ಎರಡರಷ್ಟು ವಿಸ್ತೀರ್ಣದ ಕ್ಷೀಣಿತ ಅರಣ್ಯ ಭೂಮಿಯಲ್ಲಿ ಬೆಳೆಸಲಾಗುತ್ತದೆ. 2. ಕ್ಷೇತ್ರ ನಿರ್ಧಿಷ್ಟ ಚಟುವಟಿಕೆಗಳು: ಈ ವರ್ಗದಲ್ಲಿ ಸುರಕ್ಷಿತ ವಲಯಕ್ಕೆ ಬೇಲಿ ನಿರ್ಮಾಣ, ಸುರಕ್ಷಿತ ವಲಯದಲ್ಲಿ ನೆಡುತೋಪು ನಿರ್ಮಾಣ, ಜಲಾನಯನ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ, ಕಾಲುವೆ ನೆಡುತೋಪುಗಳು, ಕುಬ್ಜ ಮತ್ತು ಔಷಧಿ ಸಸ್ಯಗಳ ನೆಡುತೋಪು ನಿರ್ಮಾಣ, ಮಣ್ಣ ಮತ್ತು ಜಲ ಸಂರಕ್ಷಣಾ ಕಾಮಗಾರಿಗಳು ಇಂಧನ ಉಳಿತಾಯ ಸಾಮಗ್ರಿಗಳನ್ನು ಅರಣ್ಯದಂಚಿನ ಗ್ರಾಮಗಳ ಜನರಿಗೆ ವಿತರಿಸುವುದು ಮುಂತಾದ ಕಾಮಗಾರಿಗಳನ್ನು ಕ್ಷೇತ್ರ ನಿರ್ಧಿಷ್ಟ ಚಟುವಟಿಕೆಗಳಡಿಯಲ್ಲಿ ಕೈಗೊಳ್ಳಲಾಗುತ್ತದೆ. 3. ಅರಣ್ಯ ಪ್ರದೇಶದ ನಿವ್ವಳ ಮೌಲ್ಯ ಬಳಕೆಗೆ ಹಮ್ಮಿಕೊಳ್ಳಲಾದ ಚಟುವಟಿಕೆಗಳು: ಇದರಡಿಯಲ್ಲಿ ಅರಣ್ಯ ಪ್ರದೇಶಗಳ ರಕ್ಷಣೆ, ಅರಣ್ಯ ಪ್ರದೇಶಗಳ ಸರಿಹದ್ದು ಕ್ರೋಢೀಕ್ರಣ, ಅರಣ್ಯಗಳ ನೈಸರ್ಗಿಕ ಪುನರುತ್ಪತ್ತಿ, ವನ್ಯಜೀವಿ ರಕ್ಷಣೆ ಮತ್ತು ನಿರ್ವಹಣೆ, ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮುಂತಾದ ಕಾರ್ಯಗಳನ್ನು ಕೈಗೊಳ್ಳಲಾಗಿದೆ.