ಇತಿಹಾಸ
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು.