ಜಾಗೃತಿ ಘಟಕದ ಆಧೀನದಲ್ಲಿ ಹನ್ನೊಂದು ಅರಣ್ಯ ಸಂಚಾರಿ ದಳಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅರಣ್ಯ ಸಂಚಾರಿ ದಳ ಪ್ರಾದೇಶಿಕ ವಿಭಾಗಗಳು ಹಾಗೂ ವನ್ಯಜೀವಿ ವಿಭಾಗಗಳ ಸಹಕಾರದೊಂದಿಗೆ ಅರಣ್ಯ ಸಂಪತ್ತು ರಕ್ಷಣೆ, ಮರಕಳ್ಳತನ ಅಕ್ರಮ ವನ್ಯಪ್ರಾಣಿಗಳ ಕಳ್ಳಬೇಟೆ ತಡೆಗಟ್ಟುವ ಕರ್ತವ್ಯವನ್ನು ನಿರ್ವಹಿಸುತ್ತವೆ. ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಹಗಲು ಮತ್ತು ರಾತ್ರಿಯ ಸಮಯದಲ್ಲಿ ತಮ್ಮ ಆಡಳಿತ ವ್ಯಾಪ್ತಿಗೆ ಸೇರಿದ ಪ್ರದೇಶಗಳಲ್ಲಿ ಗಸ್ತು ಕಾರ್ಯವನ್ನು ನಿರ್ವಹಿಸುತ್ತಾರೆ. ಅರಣ್ಯ ಇಲಾಖೆಯು ಅರಣ್ಯ ಉತ್ಪನ್ನಗಳ ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ಆಯ್ಕೆಮಾಡಿದ ಸೂಕ್ತ ಸ್ಥಳಗಳಲ್ಲಿ 161 ತನಿಖೆ ಠಾಣೆಗಳನ್ನು ರಚಿಸಲಾಗಿದೆ. ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಗಳಿಗೆ ಕಠಿಣ ಅರಣ್ಯ ಪ್ರದೇಶಗಳಲ್ಲಿ ಇತರೆ ಸಿಬ್ಬಂದಿಗಳೊಂದಿಗೆ ಸಂಪರ್ಕವನ್ನು ಸಾಧಿಸಲು ನಿಸ್ತಂತು ಉಪಕರಣಗಳನ್ನು ಸರಬರಾಜು ಮಾಡುತ್ತದೆ. ಅಲ್ಲದೇ, ಅರಣ್ಯ ಸಿಬ್ಬಂದಿಗಳಿಗೆ ಅರಣ್ಯ ರಕ್ಷಣೆ ಸಲುವಾಗಿ ಹಾಗೂ ಕಾಡು ಪ್ರಾಣಿಗಳ ಬೇಟೆ ಮಾಡುವವರ ವಿರುದ್ಧ ಹಾಗೂ ಕಾಡು ಪ್ರಾಣಿಗಳ ವಿರುದ್ಧ ಆತ್ಮ ರಕ್ಷಣೆಗಾಗಿ ಸಿಬ್ಬಂದಿಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುತ್ತದೆ. ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ನಿಸ್ತಂತು ಉಪಕರಣಗಳ ಹಾಗೂ ಶಸ್ತ್ರಾಸ್ತ್ರಗಳ ನಿರ್ವಹಣೆಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು ಜಾಗೃತಿ ಘಟಕದಿಂದ ಆಯೋಜಿಸಲಾಗುತ್ತದೆ. ಇಲಾಖೆಯು ಸ್ವೀಕರಿಸಿದ ವಿವಿಧ ದೂರು ಅರ್ಜಿಗಳ ತನಿಖೆಯನ್ನು ಜಾಗೃತದಳವು ಕೈಗೊಂಡಿರುತ್ತದೆ. ದೋಷಪೂರಿತ ಅಧಿಕಾರಿಗಳ, ಸಿಬ್ಬಂದಿಗಳ ವಿರುದ್ಧ ಬಂದ ದೂರರ್ಜಿಗಳ ಸತ್ಯಾಸತ್ಯತೆಯ ಬಗ್ಗೆ ವಿಚಾರಿಸಿ ಮೇಲಧಿಕಾರಿಗಳಿಗೆ ಮಹಿತಿ ಹಾಗೂ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗುತ್ತಿದೆ.