ಕರ್ನಾಟಕ ಅರಣ್ಯ ಇಲಾಖೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಮುಖ್ಯಸ್ಥರಾಗಿರುತ್ತಾರೆ.ಪ್ರಾದೇಶಿಕ ಆಡಳಿತದ ಉದ್ದೇಶದಿಂದ, ಇಲಾಖೆಯನ್ನು ವೃತ್ತಗಳು, ವಿಭಾಗಗಳು, ಉಪ-ವಿಭಾಗಗಳು, ವಲಯಗಳು, ಸೆಕ್ಷನ್ಗಳು ಮತ್ತು ಬೀಟ್ಗಳನ್ನಾಗಿ ವಿಂಗಡಿಸಲಾಗಿದ್ದು, ಅನುಕ್ರಮವಾಗಿ ಇವುಗಳಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ,ವಲಯ ಅರಣ್ಯಾಧಿಕಾರಿ ,ಉಪ ವಲಯ ಅರಣ್ಯಾಧಿಕಾರಿ ಮತ್ತು ಅರಣ್ಯ ರಕ್ಷಕ ಮುಖ್ಯಸ್ಥರಾಗಿರುತ್ತಾರೆ.
ಹುಲಿ ಮೀಸಲು ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು, ಸಂರಕ್ಷಿತ ಮೀಸಲು ಪ್ರದೇಶಗಳು ಮತ್ತು ಸಮುದಾಯ ಮೀಸಲು ಪ್ರದೇಶಗಳಂಥ ವನ್ಯಜೀವಿ ಪ್ರದೇಶಗಳ ಆಡಳಿತವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು/ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ರಕ್ಷಕರನ್ನು ಒಳಗೊಂಡಂತೆ ವನ್ಯಜೀವಿ ಘಟಕದ ಮೂಲಕ ನಡೆಸಲಾಗುತ್ತದೆ, ಇವರು ಸಂರಕ್ಷಿತ ಪ್ರದೇಶ ಎಂದು ಕರೆಯಲಾಗುವ ವನ್ಯಜೀವಿ ಪ್ರದೇಶಗಳ ಸಮಗ್ರ ಉಸ್ತುವಾರಿ ಹೊಂದಿರುತ್ತಾರೆ. ವನ್ಯಜೀವಿ ಘಟಕಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮುಖ್ಯಸ್ಥರಾಗಿರುತ್ತಾರೆ.
ಪ್ರತಿ ಕಂದಾಯ ಜಿಲ್ಲೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದ ಒಂದು ಸಾಮಾಜಿಕ ಅರಣ್ಯೀಕರಣ ವಿಭಾಗ ಹೊಂದಿದ್ದು, ಇದು ಜಿಲ್ಲಾ ಪಂಚಾಯತ್ಗೆ ಜೋಡಣೆಯಾಗಿರುತ್ತದೆ. ಸಾಮಾಜಿಕ ಅರಣ್ಯೀಕರಣ ವಿಭಾಗಗಳು ಅಧಿಸೂಚಿತ ಅರಣ್ಯ ಪ್ರದೇಶಗಳ ಹೊರಗೆ ಅರಣ್ಯೀಕರಣ ಪ್ರಕ್ರಿಯೆಯನ್ನು ಕೈಗೊಳ್ಳುತ್ತವೆ ಮತ್ತು ತೋಟಗಾರಿಕಾ ಅರಣ್ಯೀಕರಣ ಮತ್ತು ಕೃಷಿ ಅರಣ್ಯೀಕರಣವನ್ನು ಪ್ರೋತ್ಸಾಹಿಸುತ್ತವೆ. ಪ್ರತಿ ಸಾಮಾಜಿಕ ಅರಣ್ಯೀಕರಣ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ರಕ್ಷಕರನ್ನು ಒಳಗೊಂಡಂತೆ ಸಣ್ಣ ಸಂಘಟನೆಯನ್ನು ಹೊಂದಿರುತ್ತದೆ.
ಮೇಲೆ ಹೇಳಿದ ಪ್ರಾದೇಶಿಕ, ವನ್ಯಜೀವಿ ಮತ್ತು ಸಾಮಾಜಿಕ ಅರಣ್ಯೀಕರಣ ಘಟಕಗಳ ಜೊತೆಗೆ, ಇಲಾಖೆ ಕಾರ್ಯಯೋಜನೆ, ಸಂಶೋಧನೆ, ತರಬೇತಿ, ಮೌಲ್ಯಮಾಪನ, ಜಾಗೃತದಳ, ಮಾಹಿತಿ ಸಂವಹನ ತಂತ್ರಜ್ಞಾನ ಘಟಕ ಮತ್ತು ಸಂಚಾರಿ ದಳಗಳಂಥ ಕೆಲವು ಕಾರ್ಯನಿರತ ಘಟಕಗಳನ್ನು ಹೊಂದಿದೆ. ಈ ಘಟಕಗಳಿಗೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು/ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಇಲಾಖೆಯು ಒಟ್ಟಾರೆ 9,816 ಸಿಬ್ಬಂದಿಗಳನ್ನು ಹೊಂದಿರುತ್ತದೆ.