ವಿಭಾಗದ ಬಗ್ಗೆ
ಮಾನ್ಯ ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ (ನಾಗರಿಕ) ಸಂಖ್ಯೆ 202/1995ರ ಮೇಲಿನ ಮಧ್ಯಂತರ ಅರ್ಜಿ ಸಂಖ್ಯೆ 566 ಕ್ಕೆ 30-10-2002 ರಲ್ಲಿ ನೀಡಿದ ಆದೇಶದ ಮೇರೆಗೆ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ತನ್ನ 23-04-2004ರ ಆದೇಶದಲ್ಲಿ ಪರಿಹಾರಾತ್ಮಕ ನೆಡುತೋಪು ನಿಧಿ ನಿರ್ವಹಣೆ ಮತ್ತು ಯೋಜನ ಪ್ರಾಧಿಕಾರವನ್ನು ರಚಿಸಿದೆ. ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕಾಗಿ ಬಿಡುಗಡೆ ಮಾಡುವಾಗ ಸಂಗ್ರಹಿಸಲಾಗುವ ಪರಿಹಾರಾತ್ಮಕ ನೆಡುತೋಪು ನಿರ್ವಹಣೆ ಮೊತ್ತ, ಅರಣ್ಯ ಪ್ರದೇಶ ನಿವ್ವಳ ಮೌಲ್ಯ (ಎನ್.ಪಿ.ವಿ.) ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಈ ಬಗ್ಗೆ ನೀಡಿರುವ ಆದೇಶದ ಮೇರೆಗೆ ಸಂಗ್ರಹಿಸಲಾಗುವ ಇತರೆ ಹಣವನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಕಾಂಪಾ ಯೋಜನೆಯನ್ನು ರಚಿಸಲಾಗಿದೆ. ಕಾಂಪಾ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಮತ್ತು ಅನುದಾನ ನಿರ್ವಹಣೆ ಕುರಿತಂತೆ ಮಾರ್ಗಸೂಚಿಯನ್ನು ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲವು ದಿನಾಂಕ: 02-07-2009ರಲ್ಲಿ ನೀಡಿದೆ. ಕಾಂಪಾ ನಿಧಿಯ ಸುರಕ್ಷತೆ, ಭದ್ರತೆ ಹಾಗೂ ಇತರ ವ್ಯವಹಾರಗಳ ಮೇಲ್ವಿಚಾರಣೆ ನಡೆಸಲು ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಮಟ್ಟದ ಸಂಸದೀಯ ಸಭೆ, ರಾಜ್ಯ ಚಾಲನಾ ಸಮಿತಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗಿದೆ. ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಸಂಸದೀಯ ಸಮಿತಿ ರಾಜ್ಯಕ್ಕೆ ಸಂಬಂಧಿಸಿದ ಕಾಂಪಾ ನಿಧಿಯ ಅನುಷ್ಠಾನದ ವಿಶಾಲ ನೀತಿ ಹಾಗು ಕಾರ್ಯವಿಧಾನಗಳು ಹಾಗೂ ವಾರ್ಷಿಕ ವರದಿ, ಆಡಿಟ್ ವರದಿಗಳನ್ನು ಅನುಮೋದಿಸುತ್ತದೆ. ರಾಜ್ಯ ಚಾಲನಾ ಸಮಿತಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ವಾರ್ಷಿಕ ಕ್ರಿಯಾ ಯೋಜನೆ ಅನುಮೋದನೆ ಹಾಗೂ ಇತರ ಇಲಾಖೆಗಳೊಂದಿಗೆ ಸಮನ್ವಯವನ್ನು ಸಾಧಿಸಲು ಸಹಕಾರ ನೀಡುತ್ತದೆ. ರಾಜ್ಯ ಕಾರ್ಯಕಾರಿ ಸಮಿತಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸುವುದು ಹಾಗೂ ಅನುಮೋದನೆಗೊಂಡ ವಾರ್ಷಿಕ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ಮಾಡುತ್ತದೆ