ರಾಜ್ಯ ವಲಯದ ‘ಮಗುವಿಗೊಂದು ಮರ ಶಾಲೆಗೊಂದು ವನ’ ಯೋಜನೆಯ ಉದ್ದೇಶ ಮಕ್ಕಳಲ್ಲಿ ಪರಿಸರ ಮತ್ತು ವಾತಾವರಣದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸ್ವಯಂಪ್ರೇರಿತವಾಗಿ ಗಿಡಗಳನ್ನು ನೆಡಲು ಅವರನ್ನು ಉತ್ತೇಜಿಸುವುದು. ತಮ್ಮ ಶಾಲಾ ಆವರಣದಲ್ಲಿ ಮತ್ತು ತಮ್ಮ ಮನೆಯ ಸುತ್ತಮುತ್ತಲ ಖಾಲಿ ಜಾಗದಲ್ಲಿ ನೆಡಲು ಸಸಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಪೂರೈಸಲಾಗುತ್ತದೆ. ಶಿಕ್ಷಣ ಇಲಾಖೆ ಸಹಯೋಗದೊಂದಿಗೆ, ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಹಂತದಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಶಾಲೆಗಳಲ್ಲಿ ಗಿಡ ನೆಡುವ ಪರಿಕಲ್ಪನೆಗೆ ಹೆಚ್ಚಿನ ಗಮನ ನೀಡುವ ಸಲುವಾಗಿ, ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಶಾಲಾ ಅರಣ್ಯ ನಿರ್ಮಿಸುವ ಗುರಿಯೊಂದಿಗೆ “ತಾಲೂಕಿಗೊಂದು ಹಸಿರು ಶಾಲಾ ವನ” ಎನ್ನುವ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.