ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ
ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ
ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು
ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ
ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು.
ವಿಶ್ವದ ಬೃಹತ್ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು
ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ
ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ.
ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ.
ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ
ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ
ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ
ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು
ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು
30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ
ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ.