ರಾಷ್ಟ್ರೀಯ ಉದ್ಯಾನಗಳು

ಅಭಯಾರಣ್ಯದೊಳಗಿದೆಯೋ ಇಲ್ಲವೋ ಎನ್ನುವುದನ್ನು ಪರಿಗಣಿಸದೆ, ವನ್ಯಜೀವಿ ಮತ್ತು ಅದರ ಪರಿಸರವನ್ನು ಸಂರಕ್ಷಣೆ ಮಾಡುವ ಉದ್ದೇಶಕ್ಕಾಗಿ, ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಉಪವಿಭಾಗ 35ರ ನಿಯಮಗಳ ಅಡಿಯಲ್ಲಿ, ಯಾವುದೇ ಪ್ರದೇಶವನ್ನು ಅದರ ಪರಿಸರ, ಸಸ್ಯವರ್ಗ, ಹೂವು, ಭೂಸ್ವರೂಪ, ಅಥವಾ ಜೀವಶಾಸ್ತ್ರ ಸಂಬಂಧ ಅಥವಾ ಪ್ರಾಮುಖ್ಯತೆಯ ಕಾರಣದಿಂದ ರಾಷ್ಟ್ರೀಯ ಉದ್ಯಾನ ಎಂದು ಅಧಿಸೂಚಿತಗೊಳಿಸಬಹುದು. ರಾಷ್ಟ್ರೀಯ ಉದ್ಯಾನದ ಸಂರಕ್ಷಣೆಯ ಮಟ್ಟ ಅಭಯಾರಣ್ಯಕ್ಕಿಂತ ಹೆಚ್ಚಿರುತ್ತದೆ. ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಭೂಮಿಗೆ ಸಂಬಂಧಿಸಿದ ಎಲ್ಲಾ ಹಕ್ಕುಗಳು ರಾಜ್ಯ ಸರ್ಕಾರದ ಅಧೀನದಲ್ಲಿರುತ್ತವೆ.

ನಮ್ಮ ರಾಷ್ಟ್ರೀಯ ಉದ್ಯಾನವನಗಳನ್ನು ಅನ್ವೇಷಿಸಿ

ಪರಿಚಯ
ಸ್ಥಳ ಮತ್ತು ವಿಸ್ತಾರ
ಮಹತ್ವ
ಭೂದೃಶ್ಯ
ಕುದುರೆಮುಖ ರಾಷ್ಟ್ರೀಯ ಉದ್ಯಾನ

ಕುದುರೆಮುಖ ರಾಷ್ಟ್ರೀಯ ಉದ್ಯಾನವು ತನ್ನ ಹೆಸರನ್ನು ಸಮುದ್ರಮಟ್ಟದಿಂದ 1892 ಮೀಟರ್‌ ಎತ್ತರವಿರುವ ಅತಿ ಎತ್ತರದ ಶಿಖರ ಕುದುರೆಮುಖದಿಂದ ಪಡೆದಿದೆ. ಇದು ಕರ್ನಾಟಕದ ಅನೇಕ ಅದ್ಭುತ ಶಿಖರಗಳ ರಾಣಿಯಾಗಿದೆ. ಕುದುರೆಯ ಮುಖ ಅನ್ನುವ ಹೆಸರು ಸಮುದ್ರದ ಕಡೆ ಇರುವ ಇದರ ವಿನ್ಯಾಸಕ್ಕೆ ಅನುಗುಣವಾಗಿದ್ದು, ಹಿಂದಿನ ಕಾಲದ ನಾವಿಕರಿಗೆ ಪ್ರಸಿದ್ಧ ಗುರುತಾಗಿದೆ. ಅಂಥ ವಿಹಂಗಮ ನೋಟ ಭೂಮಿಯ ಮೇಲೆ ಎಲ್ಲೂ ಅಷ್ಟಾಗಿ ಕಂಡುಬರುವುದಿಲ್ಲ. ಇದು ಜನಪ್ರಿಯ ಶಿಖರವಾಗಿದ್ದು, ಈ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ಇರುವ ಸ್ಥಳಗಳಿಗೆ ಕಿರುನಾಮವಾಗಿದೆ, ಉದಾಹರಣೆಗೆ, ಕುದುರೆಮುಖ ಪಟ್ಟಣ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ. ಈ ಕೈಗಾರಿಕಾ-ಮತ್ತು-ಗಣಿಗಾರಿಕೆಯ ಪಟ್ಟಣ ಈಗ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದೆ.

ಸ್ಥಳ ಮತ್ತು ವಿಸ್ತಾರ

ಕುದುರೆಮುಖ ರಾಷ್ಟ್ರೀಯ ಉದ್ಯಾನ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ತ್ರಿವಳಿ ಸಂಪರ್ಕ ಬಿಂದುವಾಗಿದೆ. ಇದು ಪಶ್ಚಿಮ ಘಟ್ಟಗಳ ಶ್ರೇಣಿಯ ಸರಿಸುಮಾರು ಮಧ್ಯ ಭಾಗದಲ್ಲಿ ಇದೆ (ಗೋವಾ ಮತ್ತು ನೀಲಗಿರಿಗಳ ಮಧ್ಯದ ಪ್ರದೇಶ)ಇದು ಕರ್ನಾಟಕ ರಾಜ್ಯದ ನೈರುತ್ಯ ಭಾಗದಲ್ಲಿದ್ದು 750 01’ ರಿಂದ 750 25’ ಪೂರ್ವ ರೇಖಾಂಶ ಮತ್ತು 130 01’ ರಿಂದ 130 29’ ಉತ್ತರ ಅಕ್ಷಾಂಶದ ನಡುವೆ ಪಶ್ಚಿಮ ಕರಾವಳಿಯಿಂದ ಕೇವಲ 50 ಕಿಮೀ ದೂರದಲ್ಲಿದೆ.ಇದರ ವಿಸ್ತಾರ 671.37 ಚ. ಕಿಮೀ

ಮಹತ್ವ

ಕುದುರೆಮುಖ ರಾಷ್ಟ್ರೀಯ ಉದ್ಯಾನ, ಪಶ್ಚಿಮ ಘಟ್ಟಗಳ ಅತಿ ಕಡಿಮೆ ಅಡಚಣೆಯಿರುವ ತಗ್ಗುಪ್ರದೇಶದ ಒದ್ದೆ ನಿತ್ಯಹಸಿರು ಅರಣ್ಯಗಳು ಮತ್ತು ಶೋಲಾ ಹುಲ್ಲುಗಾವಲು ನಿಸರ್ಗದ ಅದ್ಭುತ ಭೂಪರಿಸರವಾಗಿದೆ. ಕುದುರೆಮುಖ ವಿಶ್ವದ ಪ್ರಮುಖ ಆವಾಸಸ್ಥಳ ಮತ್ತು ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ಉಷ್ಣವಲಯದ ಜೈವಿಕ ಸಮೃದ್ಧತೆಯ ದಿಕ್ಸೂಚಿಯಾಗಿದೆ ಮತ್ತು ಹೀಗಾಗಿ ವಿಶ್ವದ 34 ಜೈವಿಕ ಬಿಸಿತಾಣ (ಹಾಟ್‌ಸ್ಪಾಟ್)ಗಳ ಪೈಕಿ ಒಂದು ಎಂದು ಘೋಷಿಸಲಾಗಿದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಡಚಣೆರಹಿತ ಒದ್ದೆ ನಿತ್ಯಹಸಿರು ಅರಣ್ಯ ಪ್ರದೇಶ, ಭಾರತ ಮತ್ತು ವಿಶ್ವದಲ್ಲಿ ಸಿಂಹಬಾಲದ ಕೋತಿಯ ಏಕೈಕ ದೊಡ್ಡ ನಿರಂತರ ಸಂತತಿಯನ್ನು ಹೊಂದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ಉಷ್ಣವಲಯದ ತೇವಭರಿತ ನಿತ್ಯಹಸಿರು ಅರಣ್ಯದ ಪ್ರತಿನಿಧಿತ್ವವಾಗಿದ್ದು ಮೂರು ಮುಖ್ಯ ಮಾಂಸಾಹಾರಿಗಳಾದ ಹುಲಿ, ಚಿರತೆ ಮತ್ತು ಕಾಡುನಾಯಿಗಳ ಸಂತತಿಯನ್ನು ಹೊಂದಿದೆ. ಕುದುರೆಮುಖ ಜೈವಿಕ ವೈವಿಧ್ಯತೆ ಕುರಿತ ಸಂಶೋಧನೆ, ಶಿಕ್ಷಣ ಮತ್ತು ತರಬೇತಿಗಳಿಗೆ ‘ಜೀವಂತ ವಸ್ತುಸಂಗ್ರಹಾಲಯ’ ಮತ್ತು ‘ನೈಸರ್ಗಿಕ ಪ್ರಯೋಗಾಲಯವಾಗಿದೆ.’ ಕುದುರೆಮುಖ ತುಂಗಾ, ಭದ್ರಾ ಮತ್ತು ನೇತ್ರಾವತಿಯಂಥ ಪ್ರಮುಖ ನದಿಗಳ ಉಗಮ ಸ್ಥಳವಾಗಿದೆ ಮತ್ತು ಗುರುಪುರ, ಎಣ್ಣೆಹೊಳೆ, ಸ್ವರ್ಣ ಮತ್ತು ಸೀತಾನದಿಯಂಥ ಇತರ ಅನೇಕ ಸಣ್ಣ ನದಿಗಳಿಗೆ ನೀರುಣಿಸುತ್ತದೆ, ಇವು ಕೃಷಿಗೆ ಸಹಾಯವಾಗುವ ಮೂಲಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನರಿಗೆ ಜೀವನೋಪಾಯ ಒದಗಿಸುತ್ತವೆ.

ಭೂದೃಶ್ಯ

ಕುದುರೆಮುಖ ರಾಷ್ಟ್ರೀಯ ಉದ್ಯಾನ ಉತ್ತರದ ಮತ್ತು ನೈರುತ್ಯ ಭಾಗದ ಸಂರಕ್ಷಿತ ಪ್ರದೇಶಗಳನ್ನು (ಸೋಮೇಶ್ವರ, ಮೂಕಾಂಬಿಕಾ, ಶರಾವತಿ ಮತ್ತು ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ಮತ್ತು ಭದ್ರಾ ಹುಲಿ ಮೀಸಲು ಪ್ರದೇಶ) ಜೋಡಿಸುವ ಮೂಲಕ ದಕ್ಷಿಣ ಭಾಗದಲ್ಲಿರುವ ಸಂರಕ್ಷಿತ ಪ್ರದೇಶಗಳಿಗೆ (ಪುಷ್ಪಗಿರಿ, ತಲಕಾವೇರಿ, ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶ) ನಿರ್ಣಾಯಕ ಸಂಪರ್ಕ ಕಲ್ಪಿಸುತ್ತದೆ.ಹೀಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಕರ್ನಾಟಕದ ಅನೇಕ ಸಂರಕ್ಷಿತ ಪ್ರದೇಶಗಳನ್ನು ಜೋಡಿಸುವ ಮೂಲಕ ಪ್ರಮುಖ ಜೀವನಾಧಾರ ಪಥವಾಗಿದೆ ಮತ್ತು ವಿಸ್ತೃತ ಶ್ರೇಣಿಯ ವನ್ಯ ಜೀವಿಗಳ ವಂಶವಾಹಿ ಹರಿವನ್ನು ನಿರ್ವಹಿಸುತ್ತದೆ.ಕುದುರೆಮುಖ ಒಂದು ವಿಶಿಷ್ಟ ನಿತ್ಯ ಹಸಿರು ಶೋಲಾ ಹುಲ್ಲುಗಾವಲು ಪರಿಸರ ವ್ಯವಸ್ಥೆಯಾಗಿದ್ದು ಜೀವರಾಸಾಯನಿಕ ಚಕ್ರಗಳಿಗೆ ಸಂಬಂಧಿಸಿ ಜೀವಗೋಳದ ಅನೇಕ ನಿಯಂತ್ರಕ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಕುದುರೆಮುಖ ರಾಷ್ಟ್ರಿಯ ಉದ್ಯಾನವನವು ಪ್ರತಿ ಹೆಕ್ಟೇರ್‌ಗೆ ಅಂದಾಜು ಸರಾಸರಿ 250-300 ಟನ್‌ಗಳಷ್ಟು ಅತ್ಯಧಿಕ ಬಯೋಮಾಸ್‌ ಹೊಂದಿದೆ ಮತ್ತು ಹೀಗಾಗಿ ಅದ್ಭುತ ಇಂಗಾಲ ಹೀರುಗೊಳವೆಗಳಲ್ಲಿ ಒಂದಾಗಿದ್ದು, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ವಿರುದ್ಧ ಪರಿಹಾರ ಒದಗಿಸುತ್ತದೆ.ಪರಿಸರ ವ್ಯವಸ್ಥೆಯ ಸಂಕೀರ್ಣತೆ ಮತ್ತು ಅವುಗಳ ಕಾರ್ಯನಿರ್ವಹಣೆ ಬಗ್ಗೆ ಮನುಷ್ಯರಿಗೆ ಬಹಳ ಕಡಿಮೆ ಅರಿವು ಇದೆ.

ESZ.

07-06-2016ರಂದು ಅರಣ್ಯ ಪರಿಸರ ಮತ್ತು ಹವಗುಣ ಬದಲಾವಣೆ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ. ಅಂತಿಮ ಅಧಿಸೂಚನೆಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ವಿಸಿಟರ್ ಕಾರ್ನರ್

ಮಾಡಬೇಕಾದ ಕೆಲಸಗಳುನೋಡಿ

ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪರಿಸರ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದೆ.ಆಕರ್ಷಕ ಭೂಪರಿಸರ ಮತ್ತು ವನ್ಯಜೀವಿಗಳು ಚಾರಣಿಗರನ್ನು ಆಕರ್ಷಿಸುತ್ತವೆ.ಪ್ರವಾಸಿ ಸ್ಥಳಗಳು ಚದುರಿದಂತಿವೆ ಮತ್ತು ಒಂದೇ ಸ್ಥಳದಲ್ಲಿ ಪ್ರವಾಸಿಗರು ಜಮಾವಣೆಯಾಗುವುದಿಲ್ಲ.ಅವು, ಬೆಳ್ತಂಗಡಿ, ಕುದುರೆಮುಖ ಮತ್ತು ಕೆರೆಕಟ್ಟೆ ಈ ಮೂರು ವಲಯಗಳಲ್ಲಿ ಮೂರು ಪ್ರವಾಸಿ ಜೋನ್‌ಗಳಿವೆ.ಪ್ರವಾಸಿ ಜೋನ್‌ ಸೀಮಿತವಾಗಿದೆ ಮತ್ತು ಈ ಕೆಳಗಿನಂತಿದೆ. ಪ್ರವಾಸಿ ಜೋನ್‌ 1ಈ ಜೋನ್‌ ನೇತ್ರಾವತಿ ನದಿಯುದ್ದಕ್ಕೆ ಇರುವ ಬಂಡಾಜೆ ಜಲಪಾತ, ನಾವೂರು ವಿಶ್ರಾಂತಿ ಗೃಹ, ಬೊಳ್ಳೆ ಜಲಪಾತ ಮತ್ತು ಕಡಮಗುಂಡಿ ಜಲಪಾತಗಳ ನಡುವೆ ಇದೆ. ಪ್ರವಾಸಿ ಜೋನ್‌ 2ಇದು ಕುದುರೆಮುಖ ಪಟ್ಟಣದಿಂದ ಎಸ್‌.ಕೆ. ಬಾರ್ಡರ್‌ವರೆಗಿನ ರಾಜ್ಯ ಹೆದ್ದಾರಿ 66ರ 2 ಕಿಮೀ ಉದ್ದದ ಎರಡೂ ಬದಿಗಳಲ್ಲಿ ವ್ಯಾಪಿಸಿದೆ.ಲೈಕಾ ಅಣೆಕಟ್ಟು, ಗಣಿಗಾರಿಕೆ ಸ್ಥಳ, ಭಗವತಿ ನಿಸರ್ಗ ಶಿಬಿರ, ಕಡಂಬಿ ಜಲಪಾತ, ಸಿಂಗಸಾರ-ಗಣಪತಿಕಟ್ಟೆ, ಗೇಮ್‌ ಪಾಥ್‌, ಗಂಗಾಮೂಲ, ನಾಗತೀರ್ಥ, ಭಗವತಿ, ಕಡಂಬಿ ಗೇಮ್‌ ಪಾಥ್‌, ಸುತನಬ್ಬಿ ಜಲಪಾತಗಳಂಥ ಕೆಲವು ಸ್ಥಳಗಳು ಈ ಜೋನ್‌ನಲ್ಲಿವೆ.ಇದು ರಾಷ್ಟ್ರೀಯ ಉದ್ಯಾನದ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದು.ಅನೇಕ ಪ್ರವಾಸಿಗರು ಮತ್ತು ಹೆದ್ದಾರಿ ಸಂದರ್ಶಕರು ಉದ್ಯಾನಕ್ಕೆ ಭೇಟಿ ನೀಡ ಉದ್ಯಾನದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಪ್ರವಾಸಿ ಜೋನ್‌ 3ಈ ಜೋನ್‌ ಕಿಗ್ಗಾ ದೇಗುಲ, ನರಸಿಂಹಪರ್ವತ, ಸಿರಿಮನೆ ಜಲಪಾತ ಮತ್ತು ಯಾಲಕ್ಕಿ ಗುಡ್ಡ ಶಿಖರದ ಸುತ್ತ ವ್ಯಾಪಿಸಿದೆ, ಶೃಂಗೇರಿ ದೇಗುಲಕ್ಕೆ ಸಮೀಪ ಇರುವುದರಿಂದ ನೂರಾರು ಸಂದರ್ಶಕರನ್ನು ಆಕರ್ಷಿಸುತ್ತದೆ. ಪ್ರಸ್ತುತ ಇರುವ ಟ್ರೆಕ್ಕಿಂಗ್‌ ಹಾದಿಗಳು ಕುದುರೆಮುಖ ಶಿಖರ, ವಾಲಿಕುಂಜ ಮತ್ತು ಕುರಿಂಜಾಲ ಶಿಖರಗಳಾಗಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ನಮ್ಮ ಇಲಾಖೆಯ ಸಿಬ್ಬಂದಿ ಗೈಡ್‌ಗಳಾಗಿ ಮಾರ್ಗದರ್ಶನ ನೀಡುತ್ತಾರೆ.ಭದ್ರಾ ನದಿಯ ದಡದಲ್ಲಿ 10 ಟೆಂಟ್‌ ವಸತಿ, ಒಂದು ಡಾರ್ಮಿಟರಿ ಮತ್ತು ಅತಿಥಿಗೃಹ ಹಾಗೂ ಅಡುಗೆಮನೆ ಸೌಕರ್ಯಗಳೊಂದಿಗೆ ಭಗವತಿಯಲ್ಲಿ ನಿಸರ್ಗ ಶಿಬಿರವಿದೆ.ಮಕ್ಕಳಿಗಾಗಿ ಸಾಹಸ ಆಟಗಳು ಮತ್ತು ರೋಪ್‌ವೇಗಳು, ವೀಕ್ಷಣಾ ಗೋಪುರಗಳು ಮುಂತಾದವು ಇವೆ. ಶಿಬಿರದ ಸಮೀಪ ಕಾಡೆಮ್ಮೆ ಮತ್ತು ಜಿಂಕೆಗಳಂದ ಪ್ರಾಣಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಗಂಗಾಮೂಲ: ಗಂಗಾಮೂಲ, ಅಥವಾ ವರಾಹ ಪರ್ವತ, ಸಮುದ್ರ ಮಟ್ಟದಿಂದ 1458 ಮೀ ಎತ್ತರದ ಪರ್ವತವಾಗಿದ್ದು ಕುದುರೆಮುಖದ ಸಮೀಪ ರಾಷ್ಟ್ರೀಯ ಉದ್ಯಾನದ ಗಡಿಯೊಳಗಿದೆ. ಲಕ್ಯಾ ಅಣೆಕಟ್ಟು:ಭದ್ರಾ ನದಿಯ ಉಪನದಿ ಲಕ್ಯಾದ ಅಡ್ಡಕ್ಕೆ ನಿರ್ಮಿಸಲಾಗಿರುವ ಚೆಕ್‌ಡ್ಯಾಮ್‌ ಆಗಿದ್ದು, ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ನಿರ್ಮಿಸಿರುವ ಈ ಅಣೆಕಟ್ಟು 100 ಮೀಟರ್‌ ಎತ್ತರವಿದೆ. ಕಡಂಬಿ ಜಲಪಾತ:ಕುದುರೆಮುಖ ಶಿಬಿರದ ಸ್ಥಳ, ಕುದುರೆಮುಖ ಶಿಬಿರ, ಭಗವತಿ ನಿಸರ್ಗ ಶಿಬಿರ, ಕುರಿಂಗಲ್‌ ಶೆಡ್‌, ನರಸಿಂಹ ಪರ್ವತ ಬೇಟೆ ತಡೆ ಶಿಬಿರ, ಮಾಣಿಕ್ಯ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲೇ ಈ ಜಲಪಾತವಿದೆ.ಕುದುರೆಮುಖ ಶಿಖರ ಈ ಶಿಖರ ಸಮುದ್ರ ಮಟ್ಟದಿಂದ 1894 ಮೀ ಎತ್ತರದಲ್ಲಿದೆ, ಅರಣ್ಯಗಳಿಂದ ಆವರಿಸಲ್ಪಟ್ಟಿರುವ ಈ ಶಿಖರ ಅರಣ್ಯ ಅನ್ವೇಷಣೆಗೆ ಅತ್ಯಂತ ಸೂಕ್ತ ಸ್ಥಳ. ತಣ್ಣನೆಯ ಹವೆ ಮತ್ತು ಆಹ್ಲಾದಕರ ನಿಸರ್ಗ ಸೌಂದರ್ಯ ಸವಿಯುವ ಜೊತೆಗೆ, ಕುದುರೆಮುಖದಲ್ಲಿ ಮಾಡಬಹುದಾದ ಅನೇಕ ಕಾರ್ಯಗಳಿವೆ.ನಿಸರ್ಗಪ್ರೇಮಿ ಹಾಗೂ ಪಕ್ಷಿ ವೀಕ್ಷಕರಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಸ್ವರ್ಗವಿದ್ದಂತೆ.ಕುದುರೆಮುಖ ಶಿಖರದ ಚಾರಣದಲ್ಲಿ ನೈಜ ಅನುಭವವಿದೆ.

ತಲುಪುವುದು ಹೇಗೆನೋಡಿ

ಕುದುರೆಮುಖಕ್ಕೆ ವಿಮಾನದ ಮೂಲಕ- ಬಜಪೆ ವಿಮಾನ ನಿಲ್ದಾಣ, ಮಂಗಳೂರು (ಜೆಎಕ್ಸ್ಇ) - ದೇಶೀಯ -109 ಕಿ.ಮೀ. ಹುಬ್ಬಳ್ಳಿ ವಿಮಾನ ನಿಲ್ದಾಣ (ಎಚ್‌ಬಿಎಕ್ಸ್‌) - ದೇಶೀಯ - 350 ಕಿ.ಮೀ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‌ಆರ್‌) - ಅಂತಾರಾಷ್ಟ್ರೀಯ - 350 ಕಿ.ಮೀ. ಕುದುರೆಮುಖಕ್ಕೆ ರೈಲಿನ ಮೂಲಕ- ಸಮೀಪದ ರೈಲು ನಿಲ್ದಾಣ ಮಂಗಳೂರು, ಮತ್ತು ಉಡುಪಿ ಆಗಿದ್ದು ಭಾರತದ ಅನೇಕ ನಗರಗಳ ಸಂಪರ್ಕ ಹೊಂದಿವೆ. ಮಂಗಳೂರು ಜಂಕ್ಷನ್‌ (ಎಂಎಜೆಎನ್‌) -120 ಕಿ.ಮೀ. ಉಡುಪಿ - 80 ಕಿ.ಮೀ. ಕುದುರೆಮುಖಕ್ಕೆ ಬಸ್ ಮೂಲಕ- ರಾಷ್ಟ್ರೀಯ ಹೆದ್ದಾರಿ 13 ಮತ್ತು ರಾಜ್ಯ ಹೆದ್ದಾರಿ 66 ರಾಷ್ಟ್ರೀಯ ಉದ್ಯಾನದ ಮೂಲಕ ಹಾದುಹೋಗುತ್ತವೆ. ಆಯಕಟ್ಟಿನಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.ಮಂಗಳೂರು, ಉಡುಪಿ, ಶೃಂಗೇರಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಮತ್ತು ಬೆಂಗಳೂರಿನಿಂದ ಸಾಕಷ್ಟು ಸಂಖ್ಯೆಯ ಬಸ್‌ ಸೇವೆ ಲಭ್ಯವಿದೆ. ಚಿಕ್ಕಮಗಳೂರು - ಆಲ್ದೂರು- ಬಾಳೆಹೊನ್ನೂರು - ಕಳಸ - ಸಂಸೆ - ಕುದುರೆಮುಖ - 109 ಕಿ.ಮೀ. ಹಾಸನ - ಬೇಲೂರು - ಮೂಡಿಗೆರೆ - ಕೊಟ್ಟಿಗೆ ಹಾರ - ಕಳಸ - ಕುದುರೆಮುಖ - 140 ಕಿ.ಮೀ. ಮಂಗಳೂರು - ಕಾರ್ಕಳ -ಕುದುರೆಮುಖ -120 ಕಿ.ಮೀ. ಉಡುಪಿ - ಕಾರ್ಕಳ - ಕುದುರೆಮುಖ - 80 ಕಿ.ಮೀ.

ಭೇಟಿ ನೀಡಬಹುದಾದ ಸಮಯ ನೋಡಿ

ಕುದುರೆಮುಖದಲ್ಲಿ ಮುಂಗಾರು ಅತ್ಯಂತ ತೀವ್ರವಾಗಿದ್ದು ಸಂದರ್ಶಕರಿಗೆ ಈ ಅವಧಿ ಅಷ್ಟು ಸೂಕ್ತವಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವರ್ಷದಲ್ಲಿ 9 ತಿಂಗಳು ಮತ್ತು ದಿನಕ್ಕೆ 6 ತಾಸು ಪ್ರವಾಸಿಗರಿಗೆ ತೆರೆದಿರುತ್ತದೆ

ಶುಲ್ಕಗಳು ಮತ್ತು ಅನುಮತಿಗಳುನೋಡಿ

ಪ್ರವೇಶ ಶುಲ್ಕಗಳು- 12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ (ಕೇವಲ ಶಾಲಾ ಸಮ್ಮತಿ ಪತ್ರದೊಂದಿಗೆ ಮಾತ್ರ) - ರೂ. 50 ಮಕ್ಕಳು - ರೂ. 100 ವಯಸ್ಕರು - ರೂ. 200 ವಿದೇಶಿಗರು - ರೂ. 1000 ಡಾರ್ಮಿಟರಿ (ಸಾಮರ್ಥ್ಯ -15) -ಶುಲ್ಕಗಳು ಭಾರತೀಯರಿಗೆ - ರೂ. 75 ವಿದೇಶಿಗರಿಗೆ - ರೂ. 100 ವಾಹನ ಪಾರ್ಕಿಂಗ್ ದರಗಳು ಜೀಪ್‌/ ಕಾರು - ರೂ. 40 ಪ್ರತಿ ರಾತ್ರಿಗೆ ಎಲ್‌ಸಿವಿ - ರೂ. 60 ಪ್ರತಿ ರಾತ್ರಿಗೆ ಬಸ್‌/ ಟ್ರಕ್‌ - ರೂ. 80 ಪ್ರತಿ ರಾತ್ರಿಗೆ.

ಬುಕಿಂಗ್ / ಕಾಯ್ದಿರಿಸುವಿಕೆ<ನೋಡಿ

--

ಹವಾಮಾನನೋಡಿ

ಸಂಪೂರ್ಣ ಬೆಟ್ಟಗಳಿಂದ ಕೂಡಿರುವ ರಾಷ್ಟ್ರೀಯ ಉದ್ಯಾನದ ಹವಾಮಾನ, ಬಹಳ ಹಿತಕರ ಮತ್ತು ವರ್ಷದ ಬಹುತೇಕ ಭಾಗ ತಂಪಾಗಿರುತ್ತದೆ.ತಂಪನೆಯ ಹವೆ ಅನುಭವಕ್ಕೆ ಬರದಿರುವ ಸಮುದ್ರಕ್ಕೆ ಮುಖ ಮಾಡಿರುವ ಕಣಿವೆಗಳಲ್ಲಿ ಒಂದಿಷ್ಟು ಮಟ್ಟಿನ ಬಿಸಿ ಹವಾಮಾನದ ಪರಿಸ್ಥಿತಿಗಳ ವ್ಯತ್ಯಾಸವನ್ನು ಕಾಣಬಹುದು.ಇಲ್ಲದಿದ್ದರೆ ನೈರುತ್ಯ ಮಾರುತಗಳ ತೀವ್ರತೆಯಲ್ಲಿ ಮತ್ತು ನಂತರ ಡಿಸೆಂಬರ್‌ನಿಂದ ಜನವರಿಯವರೆಗಿನ ಅವಧಿಯಲ್ಲಿ ಈ ಉದ್ಯಾನ ಚಳಿಗಾಲವನ್ನು ಹೊಂದಿರುತ್ತದೆ.ಇಲ್ಲಿ ಫೆಬ್ರವರಿ, ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ಬೇಸಿಗೆ ಇರುತ್ತದೆ.ಮಾನ್ಸೂನ್‌ಗೆ ಮುಂಚಿನ “ತುಂತುರು ಮಳೆ” ಗುಡುಗು ಮತ್ತು ಸಿಡಿಲುಗಳಿಂದ ಕೂಡಿದ್ದು ಎಪ್ರಿಲ್‌ ಮಧ್ಯಭಾಗದಿಂದ ಮೇ ಕೊನೆಯವರೆಗೆ ಬರುತ್ತದೆ.ನೈರುತ್ಯ ಮಾನ್ಸೂನ್‌ ಜೂನ್‌ನಿಂದ ಸಪ್ಟೆಂಬರ್‌ವರಗೆ ಇರುತ್ತದೆ.ಪಶ್ಚಿಮಕ್ಕೆ ಇರುವ ಬೆಟ್ಟ ಸರಣಿಗಳು ಬಹುತೇಕ ಆಗಸಕ್ಕೆ ಸಮಾನಾಂತರವಾಗಿವೆ ಮತ್ತು ತಮ್ಮ ಎತ್ತರದಿಂದ ನೈರುತ್ಯ ಮಾರುತಗಳನ್ನು ಛೇದಿಸುತ್ತವೆ.ಮಾನ್ಸೂನ್‌ ಅವಧಿಯ ಅಸಾಮಾನ್ಯ ತೇವಾಂಶ ಪಶ್ಚಿಮ ಕರಾವಳಿಯ ವಿಶಿಷ್ಟ ಉತ್ಪನ್ನಗಳ ಬೆಳವಣಿಗೆಗೆ ಅನುಕೂಲಕರವಾಗಿರುವುದಷ್ಟೇ ಅಲ್ಲ, ಅತ್ಯಂತ ವೈಭವದ ಕಾಡುಗಳ ನಿರ್ಮಾಣಕ್ಕೂ ಕಾರಣವಾಗಿದೆ.ನೈರುತ್ಯ ಮಾರುತಗಳ ಆರಂಭದ ಕಾಲದಲ್ಲಿ ಈ ಗಿರಿಶಿಖರ ಅತ್ಯಂತ ವೈಭವದಿಂದ ಕೂಡಿರುತ್ತದೆ.ಮಳೆಯ ನೀರು ಅನೇಕ ರೋಮಾಂಚಕಾರಿ ಜಲಪಾತಗಳನ್ನು ಸೃಷ್ಟಿಸುತ್ತದೆ, ಅವು ಘರ್ಜಿಸುತ್ತ ಧುಮುಕಿ ನದಿಯಲ್ಲಿ ಕಣ್ಮರೆಯಾಗುತ್ತವೆ.ಅಕ್ಟೋಬರ್‌ ಮತ್ತು ನವೆಂಬರ್‌ ಮಾನ್ಸೂನ್‌ ನಂತರದ ಅವಧಿ ಅಥವಾ ಹಿನ್ನಡೆಯ ಮಾನ್ಸೂನ್‌ ತಿಂಗಳುಗಳಾಗಿದ್ದು, ಮೋಡ ಕವಿದ ವಾತಾವರಣ ಹೊಂದಿರುತ್ತವೆ.ಸಪ್ಟೆಂಬರ್‌ನ ಕ್ಷಣಿಕ ಮಳೆಗಳ ಅವಧಿಯಲ್ಲಿ ಈ ಉದ್ಯಾನ ಸದಾ ಮಬ್ಬು ಕವಿದ ವಾತಾವರಣ ಹೊಂದಿರುತ್ತದೆ.

ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕನೋಡಿ

ರಾಷ್ಟ್ರೀಯ ಉದ್ಯಾನದಲ್ಲಿ ಇಂಟರ್‌ನೆಟ್‌ ಮತ್ತು ಮೊಬೈಲ್‌ ಸಂಪರ್ಕ ಲಭ್ಯವಿದೆ.

ಪದೇಪದೆ ಕೇಳಲಾಗುವ ಪ್ರಶ್ನೆಗಳುನೋಡಿ

ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲು ಅತ್ಯುತ್ತಮ ಅವಧಿ ಯಾವುದು ಉತ್ತರ:ಕುದುರೆಮುಖದಲ್ಲಿ ಮಾನ್ಸೂನ್‌ ಅತ್ಯಂತ ತೀವ್ರವಾಗಿದ್ದು ಸಂದರ್ಶಕರಿಗೆ ಮಾನ್ಸೂನ್‌ ಅವಧಿ ಸೂಕ್ತವಲ್ಲ.

ಶಿಷ್ಟಾಚಾರ ಪಾಲನೆ ಮತ್ತು ನಿಷಿದ್ಧ ಚಟುವಟಿಕೆಗಳುನೋಡಿ

ಮಾಡಿರಿ

1 .ಯಾವಾಗಲೂ ಕ್ಷೇತ್ರದೊಳಗೆ ಕಡು ಬಣ್ಣದ, ಮರೆಮಾಚುವಂಥ ಮತ್ತು ಅರಣ್ಯದ ಪರಿಸರಕ್ಕೆ ಹೋಲುವ ಉಡುಪುಗಳನ್ನು ಧರಿಸಿ. 2.ಅರಣ್ಯ ಭೇಟಿಯ ಸಂದರ್ಭ ನಿಶ್ಶಬ್ಧವಾಗಿರಿ ಅಥವಾ ಮೆಲುದನಿಯಲ್ಲಿ ಮಾತಾಡಿ. 3.ಸ್ಥಳೀಯ ಗೈಡ್‌ಗಳು ಮತ್ತು ಅರಣ್ಯ ಇಲಾಖೆಯ ಇತರ ಸಿಬ್ಬಂದಿಗಳ ಆದೇಶಗಳನ್ನು ಯಾವಾಗಲೂ ಪಾಲಿಸಿ. 4.ಅರಣ್ಯದೊಳಗೆ ಯಾವಾಗಲೂ ಗುಂಪಾಗಿ ಸಂಚರಿಸಿ. 5. ಕುಡಿಯುವ ನೀರು ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಕಾಗದದ ಬ್ಯಾಗ್‌ಗಳು ಮತ್ತು ಇತರ ಪ್ಲಾಸ್ಟಿಕ್‌ಯೇತರ ವಸ್ತುಗಳನ್ನು ಬಳಸಿ. 6.ಎಲ್ಲ ತ್ಯಾಜ್ಯ ಮತ್ತು ಕಸಗಳನ್ನು ನಿಮ್ಮ ಬ್ಯಾಗ್‌ನಲ್ಲಿ ವಾಪಸ್‌ ಕೊಂಡೊಯ್ಯಿರಿ. 7.ನಿಮ್ಮ ಎಲ್ಲ ಕಸ ಮತ್ತು ತ್ಯಾಜ್ಯವಸ್ತುಗಳನ್ನು ಕೇವಲ ಕಸದ ಬುಟ್ಟಿಗಳಲ್ಲಿ ಮಾತ್ರ ಹಾಕಿ, ಇದರಿಂದ ಅವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬಹುದು. 8.ಕಾಡು ಪ್ರಾಣಿಗಳಿಗೆ ಏನನ್ನೂ ನೀಡಬೇಡಿ. 9.ಶಿಬಿರಗಳ ಸಮೀಪದಲ್ಲಿ ತಾತ್ಕಾಲಿಕ ಶೌಚಗೃಹಗಳನ್ನು ನಿರ್ಮಿಸಿದ್ದರೆ, ಮಲವಿಸರ್ಜನೆ ಬಳಿಕ, ಮಣ್ಣು ಅಥವಾ ಮರಳಿನಿಂದ ಮುಚ್ಚಿ.ಆ ಸ್ಥಳ ನೀರಿನ ಮೂಲದಿಂದ ಕನಿಷ್ಟ 30 ಮೀಟರ್‌ ದೂರದಲ್ಲಿದೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. 10.ಫೊಟೋ ತೆಗೆದುಕೊಳ್ಳುವಾಗ, ಗೌಪ್ಯತೆಯನ್ನು ಗೌರವಿಸಿ ಪೂರ್ವಾನುಮತಿ ಪಡೆದುಕೊಳ್ಳಿ ಮತ್ತು ಸಂಯಮದಿಂದಿರಿ. 11.ಸ್ಥಳೀಯ ಸಂಪ್ರದಾಯಗಳನ್ನು ಯಾವಾಗಲೂ ಗೌರವಿಸಿ .

ಮಾಡಬೇಡಿರಿ

1.ರಾಷ್ಟ್ರೀಯ ಉದ್ಯಾನ ಪ್ರದೇಶದಿಂದ ಯಾವುದೇ ಅರಣ್ಯವಸ್ತುಗಳನ್ನು ಸಂಗ್ರಹಿಸಬೇಡಿ (ಎಲೆಗಳು, ಹೂಗಳು, ಬೀಜಗಳು ಮತ್ತು ಕೀಟಗಳು ಇತ್ಯಾದಿ) 2.ತೊರೆಗಳಲ್ಲಿ ಅಥವಾ ಕಾರಂಜಿಗಳ ಸಮೀಪ ಡಿಟರ್ಜಂಟ್‌ಗಳಂಥ ಯಾವುದೇ ಮಾಲಿನ್ಯಕಾರಕಗಳನ್ನು ಬಳಸಬೇಡಿ. 3.ಶಿಬಿರದ ಸ್ಥಳದಲ್ಲಿ ಆಹಾರ ಬೇಯಿಸಲು ಕಟ್ಟಿಗೆಗಳನ್ನು ಬಳಸಬೇಡಿ. 4. ನಮ್ಮ ಪರಂಪರೆ ಎಂದು ಪರಿಗಣಿಸಲಾಗುವ ಅರಣ್ಯ ಸಂಪತ್ತನ್ನು ನಾಶ ಮಾಡಬೇಡಿ. 5.ಉರಿಯುತ್ತಿರುವ ಸಿಗರೇಟನ್ನು ಎಸೆಯಬೇಡಿ ಅಥವಾ ಅರಣ್ಯದೊಳಗೆ ಬೆಂಕಿ ಕಾಯಿಸಬೇಡಿ. 6.ಮದ್ಯಪಾನ, ಡ್ರಗ್ಸ್ ಅಥವಾ ಇತರ ಯಾವುದೇ ಮಾದಕವಸ್ತುಗಳನ್ನು ಸೇವಿಸಬೇಡಿ. 7.ಸ್ಥಳೀಯ ಮಕ್ಕಳಿಗೆ ಆಹಾರ ಅಥವಾ ಸಿಹಿ ತಿನಿಸುಗಳನ್ನು ನೀಡಿ ಅವರಿಗೆ ಆಮಿಷ ಒಡ್ಡಬೇಡಿ.. 8.ಜೋರಾದ ಸದ್ದಿನೊಂದಿಗೆ ರೇಡಿಯೋ, ಟೇಪ್‌ ರೆಕಾರ್ಡರ್‌ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್‌ ಮನರಂಜನಾ ಉಪಕರಣಗಳನ್ನು ಕೇಳಿಸಿಕೊಳ್ಳಬೇಡಿ.