ಖಾಸಗಿ ಜಮೀನಿನಲ್ಲಿ ಬೆಳೆದ ಮರಗಳ ಕಟಾವಣೆಗೆ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ, 1976ರ ಅನುಸಾರ ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡುತ್ತಿದೆ. ಮರ/ಮರಗಳ ಮಾಲೀಕತ್ವದ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದ ಬಳಿಕ ಕರ್ನಾಟಕ ಅರಣ್ಯ ಇಲಾಖೆ,ಈ ಸಾರ್ವಜನಿಕ ಸೇವೆಯನ್ನು ಒದಗಿಸುತ್ತದೆ. ಮರ/ಮರಗಳ ಕಡಿತಲೆಗೆ ಪರಿಹಾರವಾಗಿ ಮಾಡಲು, ಸಸಿಗಳನ್ನು ನೆಡುವುದನ್ನೂ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಯಲ್ಲಿ ಸೂಚಿಸಲಾಗಿದೆ. ಮರ ಅಧಿಕಾರಿಯು ಮರ/ಮರಗಳ ತಪಾಸಣೆ ಮತ್ತು ಆತನಿಗೆ ಅಗತ್ಯ ಎಂದು ಕಂಡುಬರುವ ವಿಚಾರಣೆಗಳನ್ನು ನಡೆಸಿದ ಬಳಿಕ ಪೂರ್ಣ ಅಥವಾ ಭಾಗಶಃ ಅನುಮತಿ ನೀಡಬಹುದು ಅಥವಾ ಅನುಮತಿ ನಿರಾಕರಿಸಬಹುದು. ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು (ತಿದ್ದುಪಡಿ) ಅಧಿನಿಯಮ, 2014ರಡಿ ಸರ್ಕಾರ ಈ ಸೇವೆಯನ್ನು ತಂದಿದೆ. ಮರ ಅಧಿಕಾರಿಯ ನೇಮಕಕ್ಕೆ ಸಂಬಂಧಿಸಿದ ಅಧಿಸೂಚನೆ: ಅಧಿಸೂಚನೆ ಸಂಖ್ಯೆ ಬಿ5/ಕೆಪಿಟಿ/ಸಿಆರ್-60/2014-15 ದಿನಾಂಕ: 03-10-2016.


ಫ್ಲೋಚಾರ್ಟ್ ನೋಡಿ

ಪದೇಪದೆ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯೂ) ನೋಡಿ

 • ಯಾರು ಅರ್ಜಿ ಸಲ್ಲಿಸಬೇಕು

  ಭೂಮಿ ಮತ್ತು ವೃಕ್ಷಗಳ ಮಾಲೀಕತ್ವ ಹೊಂದಿರುವ ವ್ಯಕ್ತಿಗಳು.

 • ಖಾಸಗಿ ಜಮೀನಿನಲ್ಲಿ ಮರಗಳ ಕಡಿತಲೆಗೆ ಅರ್ಜಿ ಸಲ್ಲಿಸಲು ಯಾವುದಾದರೂ ನಿರ್ದಿಷ್ಟ ನಮೂನೆ ಇದೆಯೇ

  ಹೌದು. ಕರ್ನಾಟಕ ವೃಕ್ಷ ಸಂರಕ್ಷಣಾ ನಿಯಮಗಳು 1977 (ನಮೂನೆ-1)ರಲ್ಲಿ ಸೂಚಿಸಿರುವ ನಮೂನೆಯಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸಬೇಕು.

 • ಮರ ಕಡಿತಲೆ ಅನುಮತಿಗೆ ವಿನಾಯ್ತಿ ಹೊಂದಿರುವ ಪ್ರಭೇದಗಳು ಯಾವುವು

  ಮರ ಕಡಿತಲೆ ಅನುಮತಿಗೆ 27 ಪ್ರಭೇದಗಳು ವಿನಾಯ್ತಿ ಹೊಂದಿವೆ. ವಿವರಗಳಿಗಾಗಿ ಕೆಳಗಿನ ಲಿಂ‌ಕ್‌ ನ್ನು ನೋಡಿ . https://aranya.gov.in/downloads/KTPAct1976exempted listsps.pdf

 • ಯಾವ ಪ್ರದೇಶಗಳಲ್ಲಿ ಮರ ಕಡಿತಲೆಗೆ ಅನುಮತಿ ಅಗತ್ಯವಿಲ್ಲ

  ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ಮತ್ತು ನಿಯಮಗಳು 1977ರಲ್ಲಿ ಸೂಚಿಸಿರುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಗೆ ಮರಗಳ ಕಡಿತಲೆಗೆ ಅನುಮತಿ ಅಗತ್ಯವಿರುವುದಿಲ್ಲ.

 • ಮರಗಳ ಕಡಿತಲೆಗೆ ಅನುಮತಿಗಾಗಿ ಭೂಮಿ/ಮರ ಮಾಲೀಕ ಯಾರಿಗೆ ಅರ್ಜಿ ಸಲ್ಲಿಸಬೇಕು

  ಮರ ಅಧಿಕಾರಿಯನ್ನು ನೇಮಕ ಮಾಡುವ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಆಯಾ ತಾಲ್ಲೂಕಿಗೆ ಸಂಬಂಧಿಸಿದ ಮರ ಅಧಿಕಾರಿಗೆ ಅರ್ಜಿದಾರ ಅರ್ಜಿ ಸಲ್ಲಿಸಬೇಕು. ಅಧಿಸೂಚನೆ ಸಂಖ್ಯೆ ಬಿ5/ಕೆಪಿಟಿ/ಸಿಆರ್‌-60/2014-15 ದಿನಾಂಕ: 03-10-2016. https://aranya.gov.in/downloads/Oppointing of tree officer Eng.pdf

 • ಖಾಸಗಿ ಜಮೀನಿನಲ್ಲಿ ಮರಗಳ ಕಡಿತಲೆಗೆ ಅನುಮತಿ ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು

  ಅ. ಕಂದಾಯ ಇಲಾಖೆ ದೃಢೀಕರಿಸಿರುವ ಖಾತೆ ಪ್ರಮಾಣಪತ್ರ ಆ. ಕಂದಾಯ ಇಲಾಖೆಯ ಮರ ಮಾಲೀಕತ್ವ ಪ್ರಮಾಣಪತ್ರ ಇ. ಭೂ ದಾಖಲೆಗಳ ಇಲಾಖೆಯಿಂದ ಸರ್ವೇ ನಕ್ಷೆ ಈ. ಭೂಮಿ/ಮರದ ಪಾಲು ಹೊಂದಿರುವ ಇತರ ಮಾಲೀಕರಿಂದ ಸಮ್ಮತಿ ಪತ್ರ ಉ. ಸಾಗುವಳಿ ಪರವಾನಗಿ ಪತ್ರ (ಇದ್ದಲ್ಲಿ).

 • ಗ್ರಾಮೀಣ ಪ್ರದೇಶದಲ್ಲಿ ಅನುಸೂಚಿ-I ಇದರ ವ್ಯಾಖ್ಯಾನ ಏನು

  ಚಹಾ, ರಬ್ಬರ್‌ ಅಥವಾ ಸಿಂಕೋನ ಕೃಷಿ ಭೂಮಿ ಹಾಗೂ ರಾಜ್ಯ ಸರ್ಕಾರದಿಂದ ಮಂಜೂರಾದ ಭೂಮಿಯನ್ನೊಳಗೊಂಡಂತಹ ಪ್ರದೇಶಗಳು.

 • ಗ್ರಾಮೀಣ ಪ್ರದೇಶದಲ್ಲಿ ಅನುಸೂಚಿ-II ಇದರ ವ್ಯಾಖ್ಯಾನ ಏನು

  ಇವು ಅನುಸೂಚಿ-I ರಲ್ಲಿ ಸೇರಿಸಲಾಗಿರುವುದನ್ನು ಹೊರತುಪಡಿಸಿದ ಇತರ ಪ್ರದೇಶಗಳು.

 • ನಗರ ಪ್ರದೇಶಗಳಲ್ಲಿ, ಮರ ಕಡಿತಲೆಗೆ ಅನುಮತಿ ಅಗತ್ಯವಿದೆಯೇ

  ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ಮತ್ತು ನಿಯಮಗಳು 1977ರಲ್ಲಿ ಸೂಚಿಸಿರುವ 65 ನಗರ ಪ್ರದೇಶಗಳಲ್ಲಿ ಮರ ಕಡಿತಲೆಗೆ ಅನುಮತಿ ಅಗತ್ಯವಿರುತ್ತದೆ.

 • ಒಂದು ಮರದ ಕಡಿತಲೆಗೆ ಪರಿಹಾರವಾಗಿ ಎಷ್ಟು ಸಸಿಗಳನ್ನು ನೆಡಬೇಕು

  ಒಂದು ಮರದ ಕಡಿತಲೆಗೆ ಪರಿಹಾರವಾಗಿ ಅರ್ಜಿದಾರ ಅದೇ ಭೂಮಿಯಲ್ಲಿ ಅಥವಾ ಅರಣ್ಯ ಇಲಾಖೆ ಸೂಚಿಸಿದ ಭೂಮಿಯಲ್ಲಿ ಎರಡು ಸಸಿಗಳನ್ನು ನೆಡಬೇಕು. ಒಂದು ಮರ ಕಡಿತಲೆಗೆ ಹತ್ತು ಗಿಡಗಳನ್ನು ನೆಡಬೇಕು ಎಂದು ನಿರ್ದೇಶಿಸಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರದ (ಎನ್‌ಜಿಟಿ) ಆದೇಶಕ್ಕೆ ಪ್ರಸ್ತುತ ತಡೆಯಾಜ್ಞೆ ನೀಡಲಾಗಿದೆ.

 • ಈ ಸೇವೆಯನ್ನು ಪಡೆಯಲು ಅರ್ಜಿದಾರ ಶುಲ್ಕಗಳನ್ನು ಪಾವತಿಸಬೇಕೇ

  ಇಲ್ಲ. ಆದರೆ ನೆಟ್ಟ ಸಸಿಗಳನ್ನು ಐದು ವರ್ಷಗಳ ಕಾಲ ಬೆಳೆಸಲು ಭದ್ರತೆಯ ರೂಪದಲ್ಲಿ ಇಲಾಖೆ ನಿಗದಿಪಡಿಸಿರುವ ಮೊತ್ತವನ್ನು ಅರ್ಜಿದಾರ ಠೇವಣಿ ಇಡಬೇಕು.