English     ನಮ್ಮನ್ನು ಅನುಸರಿಸಿ:
 
ಅರಣ್ಯ ಪ್ರದೇಶ ಭೇಟಿ ಮುಖಪುಟ > ಅರಣ್ಯ ಪ್ರದೇಶ ಭೇಟಿ > ಚಾರಣ ಮಾರ್ಗಗಳು
ಚಾರಣ ಮಾರ್ಗಗಳು

ಚಾರಣ

ಚಾರಣವು ನಿರ್ಧಾರಿತ, ಗುರುತುಮಾಡಲ್ಪಟ್ಟ ಜಾಡಿನಲ್ಲಿ ನಡೆಯುವುದನ್ನೊಳಗೊಂಡ ಒಂದು ಮನರಂಜನಾತ್ಮಕ, ಶೈಕ್ಷಣಿಕ ಹಾಗೂ ಸಂರಕ್ಷಣಾ ಆಧಾರಿತ ಹೊರಾಂಗಣ ಚಟುವಟಿಕೆಯಾಗಿರುತ್ತದೆ. ಈ ಚಟುವಟಿಕೆಗಳ ಸಂದರ್ಭದಲ್ಲಿ ಕರ್ನಾಟಕದ ಅರಣ್ಯಗಳ ವಿವಿಧ ವರ್ಗಗಳ ಪುಷ್ಪ ಮತ್ತು ಪ್ರಾಣಿಗಳ ಸಮೃದ್ಧ ಜೈವಿಕ ವೈವಿಧ್ಯಗಳನ್ನು ನೋಡಬಹುದು ಹಾಗೂ ಅನುಭವಿಸಬಹುದು. ಚಾರಣವು ಒಂದು ದಿನದ ಯಾತ್ರೆಯಾಗಬಹುದು ಅಥವಾ ರಾತ್ರಿ ತಂಗುವ ನಿರ್ದಿಷ್ಠ ಶಿಬಿರ ಹೂಡುವ ಸ್ಥಳಗಳನ್ನು ಒಳಗೊಂಡಿರಬಹುದು.

ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು (ಎನ್ಪಿ) ಮತ್ತು ಅಭಯಾರಣ್ಯಗಳಲ್ಲಿ (ಡಬ್ಲ್ಯೂಎಲ್ಎಸ್) ಚಾರಣ ಜಾಡುಗಳನ್ನು ಸ್ಥಾಪಿಸಲಾಗಿದೆ. ಈ ಜಾಡುಗಳು ಕಾಲುದಾರಿಗಳು ಹಾಗೂ ಉದ್ಯಾನವನದ ಸಿಬ್ಬಂದಿಗಳು ಉಪಯೋಗಿಸುವ ಗಸ್ತು ತಿರುಗುವ ಮಾರ್ಗಗಳು ಹಾಗೂ ನಿರ್ವಹಣಾ ರೂಪುರೇಷೆಯಲ್ಲಿ ಅನುಮೋದಿಸಲ್ಪಟ್ಟವು. ಈ ಸೌಲಭ್ಯಗಳು ಪ್ರಕೃತಿಪ್ರಿಯರಿಗೆ ರೋಮಾಂಚನಕಾರಿ ಅನುಭವವನ್ನು ನೀಡುತ್ತವೆಂದು ನಿರೀಕ್ಷಿಸಲಾಗಿದೆ.

ಚಾರಣ ಮಾರ್ಗಸೂಚಿಗಳು/ಸೂಚನೆಗಳು :

 • ಪ್ರತಿ ಮಾರ್ಗಕ್ಕೆ ಒಂದು ಬಾರಿಗೆ ಗರಿಷ್ಠ 6 ರಿಂದ 10 ಚಾರಣಿಗರನ್ನು ಬಿಡಲಾಗುತ್ತದೆ. ಅಲ್ಲದೆ ಜೈವಿಕ ಸೂಕ್ಷತೆ, ರಾಷ್ಟ್ರೀಯ ಉದ್ಯಾನವನಗಳು/ಅಭಯಾರಣ್ಯಗಳ ವಿಸ್ತಾರ ಹಾಗೂ ಲಭ್ಯವಿರುವ ಚಾರಣ ಮಾರ್ಗಗಳ ಸಂಖ್ಯೆಗಳನ್ನು ಆಧರಿಸಿ ಕರ್ತವ್ಯದಲ್ಲಿರುವ ಅಧಿಕಾರಿಯು ಯಾವುದೇ ಸಮಯದಲ್ಲಿ ರಾಷ್ಟ್ರೀಯ ಉದ್ಯಾನವನಗಳು/ಅಭಯಾರಣ್ಯಗಳಲ್ಲಿ ಒಟ್ಟು ಚಾರಣಿಗರ ಸಂಖ್ಯೆಯನ್ನು 20ರಿಂದ 50ರೊಳಗೆ ನಿಯಂತ್ರಿಸತಕ್ಕದ್ದು.
 • ಅರಣ್ಯ ಇಲಾಖೆಯು ಒದಗಿಸುವ ಅನುಮೋದಿತ ಮಾರ್ಗದರ್ಶಿಯು ಚಾರಣಿಗ ತಂಡಗಳೊಂದಿಗೆ ಇರಲೇಬೇಕು. ಮಾರ್ಗದರ್ಶಿಯ ಸೇವೆಯು ಕಡ್ಡಾಯ. ಭೂಭಾಗದ ಚೆನ್ನಾಗಿ ಅರಿವು ಇರುವ ಹಾಗೂ ದೈಹಿಕವಾಗಿ ದೃಢವಾಗಿರುವ ಸ್ಥಳೀಯ ಬುಡಕಟ್ಟಿನವರು ಮಾರ್ಗದರ್ಶಿಗಳಾಗಿರುತ್ತಾರೆ. ಪುಷ್ಪಗಳು ಮತ್ತು ಪ್ರಾಣಿಗಳ ಇತರ ವಿಷಯಗಳ ಬಗ್ಗೆ ವಿವರಿಸದೆ ಪ್ರಯಾಣದ ಹಾಗೂ ಸಾಮಾನ್ಯ ಬೆಂಬಲ ನೀಡುವುದು ಮಾತ್ರ ಮಾರ್ಗದರ್ಶಿಯ ಕೆಲಸವಾಗಿರುತ್ತದೆ. ಆದಾಗ್ಯೂ, ಆತನು ತನಗೆ ಸಾಮರ್ಥ್ಯವಿರುವಷ್ಟು ಮಟ್ಟಿಗೆ ಅಂತಹ ವಿಷಯಗಳ ಬಗ್ಗೆ ತಿಳಿಸಬಹುದು. ಚಾರಣದ ಸಮಯದಲ್ಲಿ ಮಾರ್ಗದರ್ಶಿಯ ಸೂಚನೆಗಳನ್ನು ಪಾಲಿಸುವುದು ಅವಶ್ಯಕ.
 • ಮಾರ್ಗದರ್ಶಿಗಳ ಸೇವೆಯಲ್ಲದೆ ಗುಂಪಿನ ನಾಯಕನೂ ಆದ ನಿಸರ್ಗಶಾಸ್ತ್ರಜ್ಞನ ಸೇವೆಯೂ ಸಹಾ ಲಭ್ಯವಿರುತ್ತದೆ. ಈ ಸೇವೆಯು ಐಚ್ಛಿಕವಾದದ್ದು; ಆದರೆ ಮರ್ಗದರ್ಶಿಯು ಇರಲೇಬೇಕು. ಪುಷ್ಪಗಳ ಹಾಗೂ ಪ್ರಾಣಿಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುವ ಹಾಗೂ ಚಾರಣಿಗರಿಗೆ ರಾಷ್ಟ್ರೀಯ ಉದ್ಯಾನವನಗಳು/ಅಭಯಾರಣ್ಯಗಳ ವಿವಿಧ ವಿಷಯಗಳ ಬಗ್ಗೆ ಅನುಭವ, ಅರಿವು ಮತ್ತು ಆಸಕ್ತಿ ಮೂಡಿಸಲು ವೈಜ್ಞಾನಿಕ ಶಿಕ್ಷಣ ನೀಡಲು ಶಕ್ತರಾಗಿರುವ ವ್ಯಕ್ತಿಗಳು ನಿಸರ್ಗಶಾಸ್ತ್ರಜ್ಞರಾಗಿರುತ್ತಾರೆ. ನಿಸರ್ಗಶಾಸ್ತ್ರಜ್ಞರು ಅವರ ಜ್ಞಾನ ಹಾಗೂ ಯೋಗ್ಯತೆಯನ್ನು ಸೂಕ್ತವಾಗಿ ಪರಿಶೀಲಿಸಿ ಮುಖ್ಯ ವನ್ಯಜೀವಿ ವಾರ್ಡನ್ರವರಿಂದ ಅಧಿಕಾರ ನೀಡಲ್ಪಟ್ಟವರಾಗಿರುತ್ತಾರೆ. ಅವರು ಅಧಿಕಾರ ನೀಡಲ್ಪಟ್ಟ ಕಾರ್ಡ್ ಹೊಂದಿರುತ್ತಾರೆ. ಈ ವೆಬ್ಸೈಟ್ನಲ್ಲಿ ಅಂತಹ ನಿಸರ್ಗಶಾಸ್ತ್ರಜ್ಞರ ಪಟ್ಟಿ ಲಭ್ಯವಿದೆ. ಅಲ್ಲದೆ, ಮೆಸರ್ಸ್ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್, ಇಲಾಖೆಯ ಸೋದರ ಸಂಸ್ಥೆಗಳು ಸಹ ಅಧಿಕಾರ ನೀಡಲ್ಪಟ್ಟ ಗುಂಪಿನ ನಾಯಕನೂ ಆದ ನಿಸರ್ಗಶಾಸ್ತ್ರಜ್ಞರನ್ನು ನಿರ್ವಹಿಸುತ್ತಾರೆ. ಚಾರಣಿಗರು ಅವರ ಸೇವೆಯನ್ನೂ ಸಹ ಪಡೆದುಕೊಳ್ಳಬಹುದು.
 • ತಂಡದ ನಾಯಕನೂ ಆದ ನಿಸರ್ಗಶಾಸ್ತ್ರಜ್ಞನು ವಿಸ್ತೃತ ಪಾತ್ರ ನಿರ್ವಹಿಸುತ್ತಾನೆ. ಆತನು ಕಾಯ್ದಿರಿಸುವಿಕೆ, ಕಾರ್ಯಕ್ರಮದ ಆರಂಭಕ್ಕೂ ಮುಂಚಿತವಾಗಿ ವಿವಿಧ ಅವಶ್ಯಕತೆಗಳ ಬಗ್ಗೆ ಚಾರಣಿಗರಿಗೆ ವಿವರಿಸುವುದು ಹಾಗೂ ಪ್ರಯಾಣದ ಸಂದರ್ಭದಲ್ಲಿ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡುವುದು ಮತ್ತು ಪರಸ್ಪರ ಚರ್ಚಿಸಿ ಇತರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ; ತಂಡದ ನಾಯಕನು ಒಂದು ನಿರ್ದಿಷ್ಟ ಶಿಬಿರ ಸ್ಥಳದಲ್ಲಿ ನೀರಿನ ಪೂರೈಕೆಯ ವ್ಯವಸ್ಥೆ ಮಾಡಬಹುದು. ಆತನು ಎಸ್ಕಿಮೋ ಗುಡಾರಗಳು ಅಥವಾ ಸರಕು ಹೊರುವವನ ಸೇವೆ ಅಥವಾ ಅಡುಗೆಯವನನ್ನು ಒದಗಿಸಬಹುದು. ಈ ಸೇವೆಗಳಿಗಾಗಿ ಅರಣ್ಯ ಇಲಾಖೆಯ ಸೇವಾ ವೆಚ್ಚಗಳು ಹಾಗೂ ಇತರ ಸೇವೆಗಳಿಗಾಗಿ ಶುಲ್ಕಗಳು ಮತ್ತು ತನ್ನದೇ ಸೇವಾ ಶುಲ್ಕವೂ ಸೇರಿರುವ ಒಂದು ಅಂದಾಜು ಪಟ್ಟಿಯನ್ನು ತಂಡದ ನಾಯಕನು ನೀಡಬಹುದು. ತಂಡದ ನಾಯಕನು ಮುಂದಿಡುವ ಶುಲ್ಕ ವಿಧಾನದಲ್ಲಿ ಮಧ್ಯಪ್ರವೇಶಿಸಲು ಅರಣ್ಯ ಇಲಾಖೆಯು ಇಚ್ಚಿಸುವುದಿಲ್ಲ. ಇತರ ತಂಡಗಳ ನಾಯಕರುಗಳಿಂದ ಸ್ಪರ್ಧಾತ್ಮಕ ಪ್ರಸ್ತಾಪಗಳನ್ನು ಸ್ವೀಕರಿಸಲು ಚಾರಣಿಗರು ಹಕ್ಕುವಳ್ಳವರಾಗಿರುತ್ತಾರೆ. ಒಮ್ಮೆ ನೇಮಿಸಿಕೊಂಡ ಹಾಗೂ ಕಾರ್ಯಕ್ರಮವು ಆರಂಭವಾದ ನಂತರ ತಂಡದ ನಾಯಕನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೆ ಮಾಡಲು ತಪ್ಪುವುದು ಆಪರಾಧವಾಗುತ್ತದೆ. ಚಾರಣಿಗರು ತಂಡದ ನಾಯಕನಷ್ಟೇ ಅಲ್ಲದೆ ಉದ್ಯಾನವನದ ಎಲ್ಲಾ ಸಿಬ್ಬಂದಿಗಳ ನಿರ್ದೇಶನಗಳನ್ನೂ ಸಹ ಪಾಲಿಸಬೇಕು.
 • ಚಾರಣದ ತಂಡದ ಎಲ್ಲಾ ಸದಸ್ಯರೂ ಒಂದೇ ಮಟ್ಟದ ದೈಹಿಕ ಸಾಮರ್ಥ್ಯವನ್ನು ಹೊಂದಿರುವುದು ಅವಶ್ಯಕ ಅಂಶವಾಗಿರುತ್ತದೆ. ದೈಹಿಕ ಅಸಮರ್ಥತೆ ಇತ್ಯಾದಿ ಕಾರಣಗಳಿಂದ ಯಾರಾದರೂ ಹಿಂದೆ ಬಿದ್ದಲ್ಲಿ, ಅಂತಹ ವ್ಯಕ್ತಿಯನ್ನು ಹೇಗಾದರೂ ಮಾಡಿ ಶಿಬಿರಕ್ಕೆ ಕರೆತರುವುದನ್ನು ಖಚಿತಪಡಿಸಿಕೊಳ್ಳುವುದು ಸಂಪೂರ್ಣ ತಂಡದ ಜವಾಬ್ದಾರಿಯಾಗಿರುತ್ತದೆ.
  ಚಾರಣ ತಂಡವು ಮುಂಚಿತವಾಗಿ ಯೋಜನೆ ಹಾಕಿಕೊಂಡಿರಬೇಕು ಹಾಗೂ ಸ್ಥಳದಿಂದ ಸ್ಥಳಕ್ಕೆ ಕ್ರಮಿಸುವ ವೇಗವನ್ನು ರೂಪಿಸಿಕೊಂಡಿರಬೇಕು. ಸೂರ್ಯ ಮುಳುಗಿದ ನಂತರ ಚಾರಣಕ್ಕೆ ಅವಕಾಶವಿಲ್ಲವಾದ್ದರಿಂದ ಕತ್ತಲಾಗುವುದಕ್ಕೆ ಮುಂಚಿತವಾಗಿ ನಿಗದಿತ ಸ್ಥಳಕ್ಕೆ ತಲುಪಲು ಇದರಿಂದ ಸಹಾಯವಾಗುತ್ತದೆ.
 • ಚಾರಣಿಗರು ನಾಗರಿಕವಾಗಿ ವರ್ತಿಸುತ್ತಾರೆಂದು, ಪರಸ್ಪರರಿಗೆ ಗೌರವ ತೋರಿಸುತ್ತರೆಂದೂ ಹಾಗೂ ಸಹಕರಿಸುತ್ತಾರೆಂದೂ ನಿರೀಕ್ಷಿಸಲಾಗಿದೆ. ಘಟನೆಯ ತೀವ್ರತೆಯ ಆಧಾರದ ಮೇಲೆ ತಂಡದ ನಾಯಕ/ಮಾರ್ಗದರ್ಶಿಯು ದುರ್ವರ್ತನೆ ತೋರುವ ಯಾವುದೇ ಚಾರಣಿಗನನ್ನು ದಂಡಿಸಬಹುದು ಅಥವಾ ಉಚ್ಛಾಟಿಸಬಹುದು ಅಥವಾ ಯಾವುದೇ ಹಂತದಲ್ಲಿ ಇಡೀ ಕಾರ್ಯಕ್ರಮವನ್ನೇ ರದ್ದುಗೊಳಿಸಬಹುದು. ಅಂತಹ ಸಂದರ್ಭದಲ್ಲಿ ಚಾರಣಿಗರಿಗೆ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ.
 • ಅವರ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ರದ್ದುಗೊಳಿಸಲು ನಿರ್ಧರಿಸಿದಲ್ಲಿ, ಭಾಗವಹಿಸಿದ ಚಾರಣಿಗರನ್ನು ಕರೆದುಕೊಂಡು ಬರಲು ಯಾವುದೇ ವಾಹನ ಸೌಲಭ್ಯ ಇರುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಚಾರಣ ಕಾರ್ಯಕ್ರಮದಲ್ಲಿ ವಾಹನಗಳಿಗೆ ಅವಕಾಶವಿರುವುದಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಾರಣದ ಆಯ್ಕೆಗಳನ್ನು ಪಡೆದುಕೊಳ್ಳತಕ್ಕದ್ದು.
 • ಯಾವುದೇ ಚಾರಣಿಗನು ಕಳೆದುಹೋದಲ್ಲಿ, ಆತನು ಅದೇ ಸ್ಥಳದಲ್ಲಿ ನಿಲ್ಲಬೇಕು ಹಾಗೂ ನಿಯಮಿತವಾಗಿ ಶಿಳ್ಳೆ ಹಾಕುತ್ತಿರಬೇಕು. ಆತನನ್ನು ಪತ್ತೆ ಮಾಡಲು ಶೋಧ ತಂಡವನ್ನು ವ್ಯವಸ್ಥೆ ಮಾಡಲಾಗುವುದು. ಅರಣ್ಯದಲ್ಲಿ ಶಿಳ್ಳೆಯು ಬಹುದೂರಕ್ಕೆ ಕೇಳಿಸುತ್ತದೆ ಮತ್ತು ಆತನನ್ನು ಪತ್ತೆ ಮಾಡಲಾಗುತ್ತದೆ. ಆತನು ಯಾವ ಸಂದರ್ಭದಲ್ಲೂ ಗಾಬರಿಯಿಂದ ಪ್ರತಿಕ್ರಿಯಿಸಬಾರದು.
 • ಕಾರ್ಯಕ್ರಮದಲ್ಲಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಅನುಮತಿ ಇರುವುದಿಲ್ಲ. ಹಾಗೆಯೇ ಸಾಕುಪ್ರಾಣಿಗಳನ್ನು ಸೇರಿಸಲಾಗುವುದಿಲ್ಲ.
 • ನಕ್ಷೆಯಲ್ಲಿ ವಿವರಿಸಿರುವ, ಗುರುತು ಮಾಡಿರುವ ಹಾದಿಯಲ್ಲಿಯೇ ಕಡ್ಡಾಯವಾಗಿ ನಡೆಯಬೇಕು. ಕಲ್ಲಿನ ದಿಬ್ಬಗಳ (ಕಲ್ಲುಗಳ ಪಿರಮಿಡ್ ಮಾದರಿಯ ರಚನೆ) ರೂಪದಲ್ಲಿ ಪ್ರತಿ 0.5 ಕಿಲೋಮೀಟರ್ಗೆ ನಿಲ್ದಾಣಗಳನ್ನು ಗುರುತು ಮಾಡಲಾಗಿದೆ. ನಿರ್ದಿಷ್ಟ ಸ್ಥಳವನ್ನು ತಲುಪುವವರೆಗೆ ನಡೆಯುತ್ತಿರಿ. ಎಲ್ಲಿಯಾದರೂ ಹಾದಿಗಳು ಕವಲೊಡಿರುವುದು ಕಂಡುಬಂದಲ್ಲಿ ಆ ಸ್ಥಳದಲ್ಲಿನ ಫಲಕಗಳು ಅಥವಾ ದಿಕ್ಕುಗಳಿಗಾಗಿ ಲಕ್ಷ್ಯ ಹರಿಸಿ ಹಾಗೂ ಸರಿಯಾದ ದಾರಿಯಲ್ಲಿ ಮುಂದುವರೆಯಿರಿ.
 • ನೀವು ತಂದಿರುವ ಯಾವುದನ್ನೂ ಸಾಗುವ ಹಾದಿಯಲ್ಲಿ ಅಥವಾ ಶಿಬಿರದಲ್ಲಿ ಎಸೆಯಬಾರದು. ಯಾವುದೇ ಕುರುಹು ಬಿಡದ ತತ್ವಗಳನ್ನು ಪಾಲಿಸಿ. ಎಲ್ಲಾ ತ್ಯಾಜ್ಯಗಳನ್ನು ಕಸದ ಚೀಲದಲ್ಲಿ ಸಂಗ್ರಿಹಿಸಿ ಹಾಗೂ ವಾಪಸ್ ತನ್ನಿ. ಇತರರು ಬಿಟ್ಟುಬಂದಿರುವ ಯಾವುದನ್ನಾದರೂ ನೀವು ಕಂಡಲ್ಲಿ, ಅವುಗಳನ್ನೂ ಸಹ ಸಂಗ್ರಹಿಸುವ ದೊಡ್ಡತನವಿರಲಿ.
 • ಚಾರಣ ಸಂದರ್ಭದಲ್ಲಿ ಬೆಂಕಿ ಪೆಟ್ಟಿಗೆಯನ್ನು ಬಳಸುವುದು ಅಥವಾ ಧೂಮಪಾನ ಮಾಡುವುದನ್ನು ನಿಷೇಧಿಸಿದೆ. ಅದು ಕಾಡ್ಗಿಚ್ಚನ್ನು ಉಂಟುಮಾಡಬಹುದು.
 • ಕಾಡಿನಿಂದ ಯಾವುದೇ ಸ್ಮರಣಿಕೆಗಳು, ಅಂದರೆ ಗಿಡಗಳು ಅಥವಾ ಪ್ರಾಣಿಗಳ ಅಂಗಾಂಗಳನ್ನು ಸಂಗ್ರಹ ಮಾಡಬೇಡಿ.
 • ಚಾರಣವು ಕಾಡಿನ ಶಿಕ್ಷಣ ಮತ್ತು ಸಂರಕ್ಷಣೆಯ ರೂಪದ ಚಟುವಟಿಕೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಆದ್ದರಿಂದ ಬೆಂಕಿಯನ್ನು ನಂದಿಸಲು ಅರಣ್ಯ ಅಧಿಕಾರಿಗಳಿಗೆ ಸಹಕರಿಸಿ. ಅದನ್ನು ಹತ್ತಿರದ ಅಧಿಕಾರಿಗೆ ವರದಿ ಸಹ ಮಾಡಿ.
 • ಅರಣ್ಯ ಅಧಿಕಾರಿಗಳಿಂದ ಕರೆ ಬಂದ ಪಕ್ಷದಲ್ಲಿ ಕಳ್ಳ ಬೇಟೆಗಾರರು, ಕಳ್ಳಸಾಗಾಣಿಕೆದಾರರನ್ನು ಹಿಡಿಯಲು ಸಹಕರಿಸಿ. ಅಂತಹ ಯಾವುದೇ ಚಟುವಟಿಕೆಯನ್ನು ತಕ್ಷಣವೇ ವರದಿ ಸಹ ಮಾಡಿ. ಜಾನುವಾರುಗಳು ಮೇಯುತ್ತಿರುವುದರ ಬಗ್ಗೆ ಸಹ ತಿಳಿಸಿ.
 • ಯಾವುದೇ ಗಾಯಗೊಂಡಿರುವ ವನ್ಯಜೀವಿಯು ಕಂಡುಬಂದಲ್ಲಿ ಅತನ್ನು ಅಧಿಕಾರಿಗಳಿಗೆ ವರದಿ ಮಾಡಿ.

ಚಾರಣಕ್ಕೆ ಉಡುಪು ಸಂಹಿತೆ

 • ಕಾಡು-ಹಸಿರು ಅಥವಾ ಕಂದುಮಣ್ಣಿನ ಬಣ್ಣದ ರೀತಿಯ ಮಾಸಲು ವರ್ಣದ ಹತ್ತಿಯ ಶರಟು.
 • ಭೂಮಿ ಬಣ್ಣದ ಆರಾಮವಾದ ಹತ್ತಿಯ ಚಡ್ಡಿ/ಪೈಜಾಮಾಗಳು/ಪ್ಯಾಂಟ್ಗಳು/ಸಲ್ವಾರ್ ಕಮೀಜ್.
 • ಉತ್ತಮ ಗುಣಮಟ್ಟದ ಚಾರಣದ ಶೂಗಳು.
 • ಸೂರ್ಯಕಿರಣವನ್ನು ತಡೆಯಲು ಶಿರಸ್ತ್ರಾಣ/ಟೋಪಿ. ಚಳಿಗಾಲದಲ್ಲಿ ಸ್ವೆಟರ್ಗಳು. ಮಳೆಯ ಸಮಯದಲ್ಲಿ ಗಾಳಿ ನಿರೋಧಕ/ರೈನ್ ಕೋಟ್.
 • ಧೋತಿ, ಸೀರೆ ಮುಂತಾದವುಗಳಿಗೆ ಅವಕಾಶವಿಲ್ಲ.

ಚಾರಣಿಗರು ಕೊಂಡೊಯ್ಯಬೇಕಾದ ವಸ್ತುಗಳು

ಚಾರಣಕ್ಕೆ ಮೂಲಭೂತ ವಸ್ತುಗಳ ಅಗತ್ಯವಿದೆ. ಕೆಲವು ಆವಶ್ಯಕ ಹಾಗೂ ಐಚ್ಚಿಕ ವಸ್ತುಗಳನ್ನು ಕೆಳಗೆ ನೀಡಲಾಗಿದೆ :

 • ಬೆನ್ನುಚೀಲ
 • ಕ್ರಮಿಸುವ ಹಾದಿಯ ನಕ್ಷೆ
 • ದಿನಕ್ಕೆ 2 ರಿಂದ 3 ಲೀಟರ್ಗಳ ಕುಡಿಯುವ ನೀರು ಇರುವ ನೀರಿನ ಬಾಟಲ್ಗಳು.
 • ಉತ್ಪತ್ತಿಯಾಗುವ ಎಲ್ಲಾ ತ್ಯಾಜ್ಯಗಳನ್ನು ಮರಳಿ ತರಲು ಕಸದ ಚೀಲಗಳು.
 • ತೆಳುವಾದ ಟವಲ್ ಹಾಗೂ ಒಳ ಉಡುಪು.
 • ಟಾಯ್ಲೆಟ್ ಸೋಪು, ಟೂಥ್ಪೇಸ್ಟ್/ಬ್ರಶ್, ಶೇವಿಂಗ್ ಕಿಟ್, ಬಾಚಣಿಗೆ, ಟಾಯ್ಲೆಟ್ ಪೇಪರ್, ಇತ್ಯಾದಿ.
 • ಔಷಧಿಗಳು (ಅವಶ್ಯಕತೆಗನುಗುಣವಾಗಿ).
 • ಟಾರ್ಚ್ ಹಾಗೂ ಮೇಣದ ಬತ್ತಿ. ಬೆಂಕಿಪಟ್ಟಣ ಅಥವಾ ಲೈಟರ್ ಇಲ್ಲ.
 • ಬೈನಾಕ್ಯುಲಾರ್ಗಳು ಮತ್ತು ಕ್ಯಾಮೆರಾ.
 • ಶಿಳ್ಳೆ ಊದುವ ಸಾಧನ
 • ಅಡುಗೆ ಮಾಡಲು ಸುಲಭವಾದ/ತಿನ್ನಲು ಸಿದ್ಧವಾಗಿರುವ ಆಹಾರ ವಸ್ತುಗಳು ಅಂದರೆ “2-ಮಿನಿಟ್ ನೂಡಲ್”, “ನಾರ್ ಸೂಪ್”, “ಎಂಟಿಆರ್ ರೆಡಿ ಮಿಕ್ಸ್” ಇತ್ಯಾದಿ ಮತ್ತು ಗ್ಲೂಕೋಸ್ ಪಟ್ಟಣ
 • ತಂಡಕ್ಕೆ ಪಾತ್ರೆಗಳು, ತಟ್ಟೆಗಳು ಇತ್ಯಾದಿ., (ಶಿಬಿರ ಸ್ಥಳದಲ್ಲಿ ದೊರೆಯುವುದರ ಬಗ್ಗೆ ವಿಚಾರಿಸಿ).
 • ಕೀಳಬಹುದಾದ ಕಾಗದದ ಪ್ಯಾಡ್ ಮತ್ತು ಪೆನ್.
 • ಮಲಗುವ ಚೀಲ/ಹೊದಿಕೆ ಮತ್ತು ಮಲಗುವ ಚಾಪೆ (6’x2’).
 • ಸೊಳ್ಳೆ ನಿರೋಧಕ.
 • ಮಳೆಗಾಲದ ಸಮಯದಲ್ಲಿ ನಿತ್ಯ ಹಸಿರಿನ ಕಾಡುಗಳಲ್ಲಿ ಕಾಣಿಸಿಕೊಳ್ಳಬಹುದಾದ; ಒಣ ಅರಣ್ಯದಲ್ಲಿ ಅಲ್ಲದ ಜಿಗಣೆಗಳನ್ನು ಓಡಿಸಲು ತಂಬಾಕು, ಉಪ್ಪು, ಇತ್ಯಾದಿ.

ತಂಡದ ನಾಯಕ/ಮಾರ್ಗದರ್ಶಿ ಕೊಂಡೊಯ್ಯಬೇಕಾದ ವಸ್ತುಗಳು

 • ಪ್ರಥಮ ಚಿಕಿತ್ಸಾ ಕಿಟ್
 • ಸ್ಟ್ರೆಚರ್ ತಯಾರಿಸಲು ಮೊಳೆಗಳು ಮತ್ತು ನಾರಿನ ಹಗ್ಗ
 • ಪುಷ್ಪಗಳು ಮತ್ತು ಪ್ರಾಣಿಗಳನ್ನು ಗುರುತಿಸುವ ಪುಸ್ತಕ
 • ಮಧ್ಯಮ ಗಾತ್ರದ ಕೋಶದಲ್ಲಿಡಬಹುದಾದ ಒಂದು ಚಾಕು ಮತ್ತು ಸ್ವಿಸ್ ಸೇನಾ ಚಾಕು
 • ರಾಡಿಯಾಗಿರುವ ನೀರನ್ನು ತಿಳಿಗೊಳಿಸಲು ಪೆಟ್ಲುಪ್ಪು (200 ಗ್ರಾಂ)
 • ಬೆಂಕಿ ಹೊತ್ತಿಸಲು ಸೀಮೆ ಎಣ್ಣೆ (200 ಮಿಲೀ)
 • ಬೆಂಕಿ ಪಟ್ಟಣ, ಲೈಟರ್ ಮತ್ತು ಮೇಣದ ಬತ್ತಿ
 • ಮುಳ್ಳನ್ನು ತೆಗೆಯಲು ಚಿಮಟಗಳು
 • ಕ್ಯಾನ್ ತೆಗೆಯುವ ಸಾಧನ
 • ಹೆಚ್ಚಿನ ಒಂದು ಜೊತೆ ಶೂಗಳು
 • ನಕ್ಷೆ, ಕೈಪಿಡಿ ಮತ್ತು ದಿಕ್ಸೂಚಿ

ಉತ್ತಮ ಚಾರಣ ಅಭ್ಯಾಸಗಳು :

 • ಯಾರೊಬ್ಬರೂ ತುಂಬಾ ಮುಂದೆ ಅಥವಾ ಹಿಂದೆ ಹೋಗದೆ ಚಾರಣ ತಂಡವು ಒಂದೇ ಸಾಲಿನಲ್ಲಿ ಜೊತೆಯಾಗಿ ನಡೆಯಬೇಕು.
 • ಸ್ವತಂತ್ರವಾಗಿರಿ. ನಿಮ್ಮ ಸರಕುಗಳನ್ನು ನೀವೇಕೊಂಡೊಯ್ಯಿರಿ. ಸರಕು 15 ಕೆಜಿ ಮೀರಬಾರದು.
 • ಚಾರಣದ ಸಂದರ್ಭದಲ್ಲಿ ಕಿರುಚುವುದು, ಉಗುಳುವುದು, ಹಾಡುವುದು ಅಥವಾ ಟ್ರಾನ್ಸಿಸ್ಟರ್ಗಳು ಮತ್ತು ಸಂಗೀತ ಸಾಧನಗಳನ್ನು ನಿಷೇಧಿಸಿದೆ.
 • ಮಾದಕ ಪದಾರ್ಥಗಳನ್ನು ಒಯ್ಯುವುದು ಅಥವಾ ಸೇವಿಸುವುದು ಗುರುತರವಾದ ಅಪರಾಧ.

ಶಿಬಿರ ಹೂಡಿಕೆಗೆ ಮಾರ್ಗದರ್ಶಿ ಸೂತ್ರಗಳು :

 • ಕಳ್ಳಬೇಟೆ ನಿಗ್ರಹ ಶಿಬಿರಗಳು (ಎಪಿಸಿ) ಅಥವಾ ಕಾಡಿನ ಕೆಲವು ವಿಶ್ರಾಂತಿ ಗೃಹಗಳಲ್ಲಿ ರಾತ್ರಿ ತಂಗುವ ವ್ಯವಸ್ಥೆ ಲಭ್ಯವಿರುತ್ತದೆ. ಇವುಗಳು ಸರಳ ಹಾಗೂ ಮೂಲಭೂತ ಸೌಲಭ್ಯಗಳು. ಯಾವುದೇ ಸುಖವಾದ ವ್ಯವಸ್ಥೆ ನಿರಿಕ್ಷೀಸಬೇಡಿ.
 • ನೀರು ಒಂದು ಸಂಕೀರ್ಣ ವಸ್ತು. ಶಿಬಿರದಿಂದ ಶಿಬಿರಕ್ಕೆ ಅದರ ಲಭ್ಯತೆ ಬದಲಾಗುತ್ತದೆ ಹಾಗೂ ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಚಾರಣಿಗರು ತಾವು ತರುವ ನೀರಿನ ಮೇಲೆ ಅವಲಂಬಿತರಾಗಬೇಕು ಅಥವಾ ಅಡುಗೆ ಮಾಡಲು, ಸ್ನಾನ ಮಾಡಲು ಇತ್ಯಾದಿಗಳಿಗಾಗಿ ಶಿಬಿರದಲ್ಲಿ ಹೆಚ್ಚಿನ ಅಗತ್ಯಕ್ಕಾಗಿ ತಂಡದ ನಾಯಕನೊಂದಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು.
 • ಮೂಲಭೂತ ವಸ್ತುಗಳಾದ ಅಲ್ಯೂಮಿನಿಯಂ ಅಡುಗೆ ಪಾತ್ರೆಗಳು, ಬೊಂಬು, ಕಟ್ಟಿಗೆಯಿಂದ ಮಾಡಿದ ಒರಟು ಮಂಚಗಳು ಹಾಗೂ ಇತರ ಕೆಲವು ವಸ್ತುಗಳನ್ನು ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿ (ಎಪಿಸಿ) ದಾಸ್ತಾನು ಇಟ್ಟಿರಬಹುದು. ಇವುಗಳ ಬಗ್ಗೆ ಮುಂಚಿತವಾಗಿಯೇ ವಿಚಾರಿಸಿ.
 • ಚಾರಣಿಗರು ಶಿಬಿರದಲ್ಲಿ ಆಹಾರ ಹಾಗೂ ಮಾರ್ಗಮಧ್ಯೆ ಊಟವನ್ನು ತಾವೇ ತಯಾರಿಸಿಕೊಳ್ಳಬೇಕು. ಶಿಬಿರದಲ್ಲಿ ಬೆಂಕಿ ಹಾಕುವುದನ್ನು ಹಾಗೂ ಆಹಾರ ತಯಾರಿಸುವುದನ್ನು ಕಲಿಯಿರಿ. ಕೆಲಸವನ್ನು ಸುಲಭಗೊಳಿಸಲು ಮಾರ್ಗದರ್ಶಿಯ ಸಹಾಯ ಕೇಳಬಹುದು.
 • ಮದ್ಯ ಸೇವನೆ ನಿಷಿದ್ಧ.
 • ಪ್ರಕೃತಿ ಕರೆ : ಪ್ರಕೃತಿ ಕರೆಯನ್ನು ನೀಗಿಸಿಕೊಳ್ಳಲು ಗುಂಡಿಗಳನ್ನು ಮಾಡಲು ಅಗತ್ಯವಾದ ಹಾರೆಯು ಲಭ್ಯವಿರುತ್ತದೆ. ಪ್ರತಿ ತಂಡಕ್ಕಾಗಿ ಶಿಬಿರಗಳ ಬಳಿ ಒಂದು ಅಥವಾ ಎರಡು ಗುಂಡಿಗಳನ್ನು (8 ಇಂಚು ವ್ಯಾಸ, 2 ಅಡಿ ಆಳದ ಗುಂಡಿಗಳು) ಅಗೆಯುವುದು ಅಗತ್ಯ. ಅವುಗಳನ್ನು ಉಪಯೋಗಿಸಿದ ನಂತರ, ಯಾವುದಾದರೂ ಟಾಯ್ಲೆಟ್ ಪೇಪರ್ ಇದ್ದಲ್ಲಿ ಅದನ್ನು ಅದರಲ್ಲಿ ಹಾಕಿರಿ; ಗುಂಡಿಗೆ ಮಣ್ಣನ್ನು ತಳ್ಳುವ ಮೂಲಕ ಅವುಗಳನ್ನು ಮುಚ್ಚಿ. ಬೇರೆಡೆ ಅದನ್ನು ಮಾಡುವುದನ್ನು ನಿಷೇಧಿಸಿದೆ.
 • ರಾತ್ರಿ ಉಪಯೋಗಿಸಲು ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿ (ಎಪಿಸಿ) ಒಂದೆರಡು ದೀಪಗಳಿರಬಹುದು, ಆದರೆ, ಬೆಳಗಿನ ಪ್ರಯಾಣಕ್ಕೆ ನೀವು ಬೇಗನೆ ಏಳಲು ರಾತ್ರಿ ಬೇಗ ಮಲಗುವುದರ ಬಗ್ಗೆ ನಿಗಾ ವಹಿಸಿ.
 • ರಾತ್ರಿಯಾದ ನಂತರ ಚಾರಣಿಗರು ಕಳ್ಳಬೇಟೆ ನಿಗ್ರಹ ಶಿಬಿರಗಳ (ಎಪಿಸಿ) ಗಡಿಯಿಂದ ಆಚೆಗೆ ಹೋಗಬಾರದು. ಒಂದು ವೇಳೆ ತಂಡದ ನಾಯಕ ಅಥವಾ ಮಾರ್ಗದರ್ಶಿಯಿಂದ ಅನುಮೋದಿಸಲ್ಪಟ್ಟಿದ್ದಲ್ಲಿ, ಶಿಬಿರದ ಎಲ್ಲೆಯೊಳಗೆ ಮಾತ್ರ ಶಿಬಿರ ಬೆಂಕಿಗೆ ಅನುಮತಿ ಇರುತ್ತದೆ.

ಒಮ್ಮೆ ತಂಡವು ಹೊರಹೋಗುವ ಸ್ಥಳವನ್ನು ತಲುಪಿದಲ್ಲಿ ಚಾರಣದ ಕಾರ್ಯಕ್ರಮವು ಮುಕ್ತಾಯವಾಯಿತೆಂದು ಪರಿಗಣಿಸಲಾಗುತ್ತದೆ. ಈ ಸ್ಥಳದಿಂದ ಮುಂದೆ ಪ್ರಯಾಣಿಸುವುದು ಚಾರಣಿಗರ ಜವಾಬ್ದಾರಿಯಾಗಿರುತ್ತದೆ. ಹೊರಹೋಗುವ ಸ್ಥಳದಿಂದ ಮನೆಯವರೆಗೆ ಪ್ರಯಾಣಿಸುವ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಕಲೆಹಾಕಲು ಪ್ರಯತ್ನಿಸಿ.

ಒದಗಿಸಿದ್ದ ಪಕ್ಷದಲ್ಲಿ ದಯವಿಟ್ಟು ‘ಅಭಿಪ್ರಾಯ ಕಾರ್ಡ್’ ಭರ್ತಿ ಮಾಡಿ ಹಾಗೂ ಅದನ್ನು ಮುಖ್ಯ ವನ್ಯಜೀವಿ ವಾರ್ಡನ್ ರವರಿಗೆ ಅಂಚೆ ಮೂಲಕ ಕಳುಹಿಸಿ ಅಥವಾ ಸಿಸಿಎಫ್ಡಬ್ಲ್ಯೂಎಲ್@ವಿಎಸ್ಎನ್ಎಲ್.ಕಾಮ್ಗೆ ಇ-ಮೇಲ್ ಮಾಡಿ.

ಚಾರಣ ಕಾರ್ಯಕ್ರಮದ ಸಂದರ್ಭದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಲು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಚಟುವಟಿಕೆಗಳು ಕಾಡು ಪ್ರದೇಶದಲ್ಲಿ ನಡೆಯುವದರಿಂದ ಯಾವಾಗಲೂ ಕೆಲವು ಅಪಾಯಗಳಿರುತ್ತವೆ ಮತ್ತು ಯಾವುದೇ ಗಾಯ ಅಥವಾ ಜೀವಹಾನಿಗೆ ಅರಣ್ಯ ಇಲಾಖೆಯು ಹೊಣೆಯಲ್ಲ.

ಎಲ್ಲಾ ಚಾರಣಿಗರಿಗೂ ಅರಣ್ಯ ಇಲಾಖೆಯು ಸಂತೋಷದಾಯಕ ಅನುಭವವನ್ನು ಹಾರೈಸುತ್ತದೆ.

ಸಹಿ/-
ಮುಖ್ಯ ವನ್ಯಜೀವಿ ವಾರ್ಡನ್

 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?